ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಫೈನಲ್ ಪಂದ್ಯ ಇಂದು ( ಮಾರ್ಚ್ 8 ) ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿ ನ್ಯೂಜಿಲೆಂಡ್‌ಗೆ 256 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.
ಭಾರತದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಅಬ್ಬರದ ಆರಂಭ ನೀಡಿದರು. ಇವರಿಬ್ಬರ ತಾಂಡವಕ್ಕೆ ಕೇವಲ 4 ಓವರ್‌ನಲ್ಲೇ ಭಾರತ ಅರ್ಧಶತಕ ಪೂರೈಸಿತು ಹಾಗೂ 7.2 ಓವರ್‌ಗಳಲ್ಲಿ ಶತಕ ದಾಟಿತು. ಅಭಿಷೇಕ್ ಶರ್ಮಾ ಟೂರ್ನಿಯ ವೇಗದ ಅರ್ಧಶತಕ ಬಾರಿಸಿ 21 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 52 ರನ್ ಬಾರಿಸಿದರು. ಬಳಿಕ ಎರಡನೇ ವಿಕೆಟ್‌ಗೆ ಒಂದಾದ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ 48 ಎಸೆತಗಳಲ್ಲಿ 105 ರನ್ ಬಾರಿಸಿದರು. ಟೂರ್ನಿಯಲ್ಲಿ ಸತತ ಮೂರು ಅರ್ಧಶತಕ ಚಚ್ಚಿದ ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 5 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 89 ಸಿಕ್ಸರ್ ಚಚ್ಚಿದರೆ, ಇಶಾನ್ ಕಿಶನ್ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 54 ರನ್ ಚಚ್ಚಿದರು. ಹೀಗೆ ಕೇವಲ 15 ಓವರ್‌ಗಳಲ್ಲಿ ದ್ವಿಶತಕ ದಾಟಿದ್ದ ಭಾರತ ಜೇಮ್ಸ್ ನೀಶಮ್ ಎಸೆದ 16ನೇ ಓವರ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಸ್ಯಾಮ್ಸನ್, ಇಶಾನ್ ಕಿಶನ್ ಹಾಗೂ ಆಗ ತಾನೇ ಬಂದ ಸೂರ್ಯಕುಮಾರ್ ಯಾದವ್ ವಿಕೆಟ್ ಒಪ್ಪಿಸಿದರು. ಸೂರ್ಯ ಡಕ್‌ಔಟ್ ಆದರೆ, ಹಾರ್ದಿಕ್ ಪಾಂಡ್ಯ 18 ರನ್ ಬಾರಿಸಿದರು. ಇನ್ನುಳಿದಂತೆ ತಿಲಕ್ ವರ್ಮಾ ಅಜೇಯ 8 ರನ್ ಹಾಗೂ ಕೊನೆಯ ಓವರ್‌ನಲ್ಲಿ ಅಬ್ಬರಿಸಿದ ಶಿವಮ್ ದುಬೆ 8 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 26 ರನ್ ಬಾರಿಸಿದರು.
ನ್ಯೂಜಿಲೆಂಡ್ ಪರ ಜೇಮ್ಸ್ ನೀಶಮ್ ಮೂರು ವಿಕೆಟ್, ರಚಿನ್ ರವೀಂದ್ರ ಹಾಗೂ ಮ್ಯಾಟ್ ಹೆನ್ರಿ ತಲಾ ಒಂದೊಂದು ವಿಕೆಟ್ ಪಡೆದರು.

