ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಫೈನಲ್ ಪಂದ್ಯ ಇಂದು ( ಮಾರ್ಚ್ 8 ) ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಭಾರತದ ಪರ ಆರಂಭಿಕರಾಗಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಕಣಕ್ಕಿಳಿದರು.
ಆರಂಭದಲ್ಲಿ ಪಿಚ್ ಅರಿಯಲು ಜಾಣ್ಮೆಯಿಂದ ಬ್ಯಾಟ್ ಬೀಸಿದ ಈ ಜೋಡಿ ನಂತರ ಅಬ್ಬರಿಸಲು ಆರಂಭಿಸಿತು. ಕೇವಲ 4 ಓವರ್‌ಗಳಲ್ಲಿ ಅರ್ಧಶತಕ ಬಾರಿಸಿದ ಭಾರತ ಟಿ ಟ್ವೆಂಟಿ ವಿಶ್ವಕಪ್ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ವೇಗದ ತಂಡದ ಅರ್ಧಶತಕ ನಿರ್ಮಿಸಿದ ದಾಖಲೆ ಬರೆಯಿತು.
ಅಲ್ಲದೇ ಕೇವಲ 7.2 ಓವರ್‌ಗಳಲ್ಲಿ 100 ರನ್ ಪೂರೈಸಿದ ಭಾರತ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ನಾಕ್‌ಔಟ್ ಪಂದ್ಯಗಳಲ್ಲಿ ವೇಗದ ತಂಡದ ಶತಕ ಬಾರಿಸಿದ ದಾಖಲೆಯನ್ನೂ ಸಹ ನಿರ್ಮಿಸಿತು. ಈ ಮೂಲಕ ಇದೇ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7.5 ಓವರ್‌ಗಳಲ್ಲಿ ಶತಕ ಪೂರೈಸಿದ್ದ ನ್ಯೂಜಿಲೆಂಡ್ ದಾಖಲೆಯನ್ನು ಭಾರತ ಮುರಿದುಹಾಕಿದೆ.

