HomeIndiaತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕಿಲ್ಲ! ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕಿಲ್ಲ! ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಕುಟುಂಬದಲ್ಲಿ ಆಸ್ತಿ ಹಂಚಿಕೆಯ ಮಾತು ಬಂದಾಗ ಸಹಜವಾಗಿಯೇ ಹಲವು ಪ್ರಶ್ನೆಗಳು ಎದುರಾಗುತ್ತವೆ. ತಾತನ ಆಸ್ತಿಯಲ್ಲಿ ಮೊಮ್ಮಗನಿಗೂ ಪಾಲು ಸಿಗಬೇಕಲ್ಲವೇ? ತಂದೆಗೆ ಬಂದ ಪಿತ್ರಾರ್ಜಿತ ಆಸ್ತಿಯಲ್ಲಿ ಮಗನಿಗೂ ಸಮಾನ ಹಕ್ಕು ಇರಬೇಕಲ್ಲವೇ? ಎಂಬ ಪ್ರಶ್ನೆಗಳು ಅನೇಕ ಕುಟುಂಬಗಳಲ್ಲಿ ಆಸ್ತಿ ವಿವಾದಗಳಿಗೆ ಕಾರಣವಾಗುತ್ತವೆ. ಆದರೆ, ತಾತನಿಂದ ತಂದೆಗೆ ಬಂದ ಆಸ್ತಿಯಲ್ಲಿ ಮಗನಿಗೆ ಯಾವಾಗಲೂ ಜನ್ಮಸಿದ್ಧ ಹಕ್ಕು ಇರುತ್ತದೆ ಎಂಬುದು ತಪ್ಪು ಕಲ್ಪನೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇದೀಗ ಮಹತ್ವದ ತೀರ್ಪು ನೀಡಿದ್ದು, ಹಲವು ಕುಟುಂಬಗಳ ಆಸ್ತಿ ಹಕ್ಕಿನ ಲೆಕ್ಕಾಚಾರವನ್ನೇ ಸ್ಪಷ್ಟಪಡಿಸಿದೆ.

ತಂದೆಗೆ ತಾತನಿಂದ ಆಸ್ತಿ ಬಂದಿದೆ ಎಂದ ಮಾತ್ರಕ್ಕೆ ಆ ಆಸ್ತಿಯಲ್ಲಿ ಮಗನಿಗೆ ಸ್ವಯಂಚಾಲಿತವಾಗಿ ಪಾಲು ಸಿಗುವುದಿಲ್ಲ. ತಂದೆ ಜೀವಂತವಾಗಿರುವಾಗ, ಹಿಂದೂ ಉತ್ತರಾಧಿಕಾರ ಕಾಯ್ದೆ 1956ರ ಸೆಕ್ಷನ್ 8ರ ಅಡಿಯಲ್ಲಿ ಅವರಿಗೆ ಬಂದಿರುವ ಆಸ್ತಿಯಲ್ಲಿ ಮಗ ಅಥವಾ ಮೊಮ್ಮಗ ಜನ್ಮಸಿದ್ಧ ಹಕ್ಕು ಹೊಂದಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

30 ವರ್ಷಗಳಿಂದ ನಡೆಯುತ್ತಿದ್ದ ಆಸ್ತಿ ವಿವಾದಕ್ಕೆ ತೆರೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮಿಳುನಾಡಿಗೆ ಸಂಬಂಧಿಸಿದ ಸುಮಾರು 30 ವರ್ಷಗಳ ಹಿಂದಿನ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಆಗಸ್ಟಿನ್ ಜಾರ್ಜ್ ಮಸೀಹ್ ಮತ್ತು ಸುನೀತಾ ಅಗರ್ವಾಲ್ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಚೆನ್ನೈ ಮೂಲದ ವ್ಯಕ್ತಿಯೊಬ್ಬರು 1997ರಲ್ಲಿ ತಮ್ಮ ತಾತನ ಆಸ್ತಿ ವಿಭಜನೆಯಿಂದ ತಂದೆಗೆ ಬಂದಿದ್ದ ಭೂಮಿಯಲ್ಲಿ ಅರ್ಧ ಪಾಲು ಕೇಳಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ತಂದೆ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಆದರೆ, ಈ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಈ ಹಿಂದೆಯೇ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದು ಅರ್ಜಿಯನ್ನು ವಜಾಗೊಳಿಸಿದೆ.

ಸೆಕ್ಷನ್ 8ರ ಅಡಿಯಲ್ಲಿ ಆಸ್ತಿ ಹಂಚಿಕೆಯಾದರೆ ಏನಾಗುತ್ತದೆ?
1956ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 8ರ ಪ್ರಕಾರ, ವ್ಯಕ್ತಿಯೊಬ್ಬರು ಮೃತಪಟ್ಟಾಗ ಅವರ ಆಸ್ತಿ ಮೊದಲು ಕ್ಲಾಸ್-1 ಕಾನೂನುಬದ್ಧ ವಾರಸುದಾರರಿಗೆ ವರ್ಗಾವಣೆಯಾಗುತ್ತದೆ.

ಈ ರೀತಿ ತಂದೆಗೆ ಬಂದ ಆಸ್ತಿಯನ್ನು ಅವರ ವೈಯಕ್ತಿಕ ಆಸ್ತಿಯೆಂದು ಪರಿಗಣಿಸಲಾಗುತ್ತದೆ. ಅದು ಸ್ವಯಂಚಾಲಿತವಾಗಿ ತಂದೆ ಮತ್ತು ಮಕ್ಕಳ ನಡುವಿನ ಅವಿಭಕ್ತ ಕುಟುಂಬದ ಆಸ್ತಿಯಾಗುವುದಿಲ್ಲ. ಹೀಗಾಗಿ ಆಸ್ತಿಯ ಮೇಲೆ ತಂದೆಗೆ ಸಂಪೂರ್ಣ ಹಕ್ಕು ಇರುತ್ತದೆ ಎಂದು ನ್ಯಾಯಪೀಠ ವಿವರಿಸಿದೆ.

ತಂದೆ ಬದುಕಿರುವಾಗ ಮಗನಿಗೆ ಪಾಲು ಕೇಳಲು ಸಾಧ್ಯವಿಲ್ಲ!
ತಂದೆ ಜೀವಂತವಾಗಿರುವಾಗ ಅವರಿಗೆ ಸೆಕ್ಷನ್ 8ರ ಅಡಿಯಲ್ಲಿ ಬಂದಿರುವ ಆಸ್ತಿಯಲ್ಲಿ ಮಗ ಅಥವಾ ಮೊಮ್ಮಗ ಜನ್ಮಸಿದ್ಧ ಹಕ್ಕು ಹೊಂದಿರುವುದಿಲ್ಲ. ಕೇವಲ ತಾತನ ಆಸ್ತಿಯಾಗಿತ್ತು ಎಂಬ ಕಾರಣಕ್ಕೆ ಮೊಮ್ಮಗ ಆಸ್ತಿಯಲ್ಲಿ ಪಾಲು ಕೇಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.ಅಲ್ಲದೆ, ತಂದೆಗೆ ಬಂದಿರುವ ಆಸ್ತಿಯನ್ನು ಮಾರಾಟ ಮಾಡುವುದು ಅಥವಾ ಬೇರೆಯವರಿಗೆ ವರ್ಗಾಯಿಸುವ ನಿರ್ಧಾರ ಅವರ ಹಕ್ಕಿಗೆ ಒಳಪಟ್ಟಿರುತ್ತದೆ. ಅದನ್ನು ಮೊಮ್ಮಗ ಜನ್ಮಸಿದ್ಧ ಹಕ್ಕಿನ ಆಧಾರದ ಮೇಲೆ ಪ್ರಶ್ನಿಸಲು ಸಾಧ್ಯವಿಲ್ಲ ಎಂಬುದು ಈ ತೀರ್ಪಿನ ಪ್ರಮುಖ ಅಂಶವಾಗಿದೆ.

ಆದರೆ, ಪ್ರತಿಯೊಂದು ಪಿತ್ರಾರ್ಜಿತ ಆಸ್ತಿಗೂ ಇದೇ ನಿಯಮ ಅನ್ವಯಿಸುತ್ತದೆ ಎಂದರ್ಥವಲ್ಲ. ಆಸ್ತಿ ಯಾವ ರೀತಿಯಲ್ಲಿ ಬಂದಿತು, ಅದರ ಕಾನೂನು ಸ್ವರೂಪ ಏನು ಎಂಬುದರ ಆಧಾರದ ಮೇಲೆ ಹಕ್ಕುಗಳು ನಿರ್ಧಾರವಾಗುತ್ತವೆ.

ಗಮನಿಸಿ: ಇದು ಆಸ್ತಿ ಮತ್ತು ಕಾನೂನು ವಿಚಾರಕ್ಕೆ ಸಂಬಂಧಿಸಿದ ಸಾಮಾನ್ಯ ಮಾಹಿತಿ. ಪ್ರತಿಯೊಂದು ಪ್ರಕರಣದ ದಾಖಲೆಗಳು ಹಾಗೂ ಸನ್ನಿವೇಶಗಳು ವಿಭಿನ್ನವಾಗಿರಬಹುದು. ಆಸ್ತಿ ಹಕ್ಕುಗಳ ಕುರಿತು ನಿರ್ಧಾರ ಕೈಗೊಳ್ಳುವ ಮೊದಲು ಕಾನೂನು ತಜ್ಞರ ಸಲಹೆ ಪಡೆಯಿರಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular