ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿದೆ. ಈ ಮೂಲಕ ಸೆಮಿಫೈನಲ್ ಟಿಕೆಟ್ ಪಡೆದುಕೊಂಡಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್ ಆರಿಸಿಕೊಂಡು ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವಿಭಾಗದ ಉತ್ತಮ ಆಟದಿಂದಾಗಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿ ಭಾರತಕ್ಕೆ 196 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 19.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು.
ವೆಸ್ಟ್ ಇಂಡೀಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಶೈ ಹೋಪ್ ಹಾಗೂ ರಾಸ್ಟನ್ ಚೇಸ್ 68 ರನ್‌ಗಳ ಜತೆಯಾಟವನ್ನಾಡಿದರು. ಹೋಪ್ 32 ರನ್ ಗಳಿಸಿದರೆ, ಚೇಸ್ 40 ರನ್ ಬಾರಿಸಿದರು. ಇನ್ನುಳಿದಂತೆ ಕಣಕ್ಕಿಳಿದ ಕೂಡಲೇ ಅಬ್ಬರಿಸಿದ ಶಿಮ್ರಾನ್ ಹೆಟ್ಮಾಯೆರ್ 12 ಎಸೆತಗಳಲ್ಲಿ 27 ರನ್ ಬಾರಿಸಿ ಬೇಗನೆ ವಿಕೆಟ್ ಒಪ್ಪಿಸಿದರು. ಭಯಾನಕ ಆಟಗಾರ ಶೆರ್ಫೆನ್ ರುದರ್‌ಫೋರ್ಡ್ 14 ರನ್ ಕಲೆಹಾಕಿ ನಿರ್ಗಮಿಸಿದರು. ಹೀಗೆ 119 ರನ್‌ಗೆ 4 ವಿಕೆಟ್ ಕಳೆದುಕೊಂಡ ವೆಸ್ಟ್ ಇಂಡೀಸ್ ತಂಡದ ಪರ ಐದನೇ ವಿಕೆಟ್‌ಗೆ ಜತೆಯಾದ ಜೇಸನ್ ಹೋಲ್ಡರ್ ರೊವ್‌ಮನ್ ಪೋವೆಲ್ ಜೋಡಿ 35 ಎಸೆತಗಳಲ್ಲಿ 76 ರನ್‌ಗಳ ಜತೆಯಾಟವನ್ನಾಡಿ ಒಳ್ಳೆಯ ಕೊಡುಗೆ ನೀಡಿದರು. ಹೋಲ್ಡರ್ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 37 ರನ್ ಬಾರಿಸಿದರೆ, ಪೋವೆಲ್ 19 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 34 ರನ್ ಕಲೆಹಾಕಿದರು.
ಭಾರತದ ಪರ ಜಸ್‌ಪ್ರೀತ್ ಬುಮ್ರಾ ಎರಡು ವಿಕೆಟ್, ಹಾರ್ದಿಕ್ ಪಾಂಡ್ಯ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತದ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ 10 ರನ್‌ಗೆ ಔಟ್ ಆಗುವ ಮೂಲಕ ಮತ್ತೊಮ್ಮೆ ವಿಫಲರಾದರು. ಬೆನ್ನಲ್ಲೇ ಇಶಾನ್ ಕಿಶನ್ ಸಹ 10 ರನ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಸೂರ್ಯಕುಮಾರ್ ಯಾದವ್ 18, ತಿಲಕ್ ವರ್ಮಾ 27, ಹಾರ್ದಿಕ್ ಪಾಂಡ್ಯ 17 ರನ್ ಗಳಿಸಿದರಾದರೂ ಮತ್ತೊಂದೆಡೆ ನೆಲಕಚ್ಚಿ ನಿಂತಿದ್ದ ಸಂಜು ಸ್ಯಾಮ್ಸನ್‌ಗೆ ಹೆಚ್ಚು ಸಮಯ ಸಾಥ್ ಕೊಡಲಿಲ್ಲ. ಹೀಗೆ ಒಂದೆಡೆ ವಿಕೆಟ್ ಉರುಳುತ್ತಿದ್ದರೆ ಮತ್ತೊಂದೆಡೆ ತನ್ನ ಆಟದುದ್ದಕ್ಕೂ ಯಾವುದೇ ತಪ್ಪು ಮಾಡದೇ ಮೊದಲ ಎಸೆತದಿಂದಲೇ ಅಬ್ಬರಿಸಿ ದಿಟ್ಟ ಆಟವನ್ನಾಡಿದ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 97 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಅಗತ್ಯವಿದ್ದ ಸಂದರ್ಭದಲ್ಲಿ ಎರಡು ಬೌಂಡರಿ ಬಾರಿಸಿದ ಶಿವಮ್ ದುಬೆ ಅಜೇಯ 8 ರನ್ ಬಾರಿಸಿದರು.
ವೆಸ್ಟ್ ಇಂಡೀಸ್ ಪರ ಜೇಸನ್ ಹೋಲ್ಡರ್ ಹಾಗೂ ಶಮರ್ ಜೋಸೆಫ್ ತಲಾ ಎರಡು ವಿಕೆಟ್ ಮತ್ತು ಅಕೆಲ್ ಹೊಸೈನ್ ಒಂದು ವಿಕೆಟ್ ಪಡೆದರು.

