HomeIndiaನಟ ಕಮಲ್ ಹಾಸನ್ ವಿರುದ್ಧ ದೂರು ದಾಖಲು; 23 ವರ್ಷಗಳ ಹಿಂದಿನ ವಿವಾದ ಮತ್ತೆ ಮುನ್ನೆಲೆಗೆ.!

ನಟ ಕಮಲ್ ಹಾಸನ್ ವಿರುದ್ಧ ದೂರು ದಾಖಲು; 23 ವರ್ಷಗಳ ಹಿಂದಿನ ವಿವಾದ ಮತ್ತೆ ಮುನ್ನೆಲೆಗೆ.!

ಚೆನ್ನೈ: ಒಂದು ಸಿನಿಮಾ ತೆರೆಗೆ ಬರುವ ಮುನ್ನವೇ ಅದರ ಶೀರ್ಷಿಕೆ ವಿವಾದದ ಕೇಂದ್ರವಾಗಿದ್ದು, ಇದೀಗ ನಟ ಹಾಗೂ ಸಂಸದ ಕಮಲ್ ಹಾಸನ್ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. 23 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಪ್ರತಿಭಟನೆ ಮತ್ತು ಅಶಾಂತಿಗೆ ಕಾರಣವಾಗಿದ್ದ ‘ಸಂಡಿಯಾರ್’ (Sandiyar) ಎಂಬ ಹೆಸರನ್ನೇ ಮತ್ತೆ ತಮ್ಮ ಮುಂಬರುವ ಸಿನಿಮಾಗೆ ಇಟ್ಟಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಕಮಲ್ ಹಾಸನ್ ಅಭಿನಯದ ಈ ಚಿತ್ರಕ್ಕೆ ಎಸ್.ಯು. ಅರುಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಆದರೆ, ಚಿತ್ರದ ಶೀರ್ಷಿಕೆಯಿಂದ ಜಾತಿ ಸಂಘರ್ಷ ಮತ್ತು ಸಾಮಾಜಿಕ ಅಶಾಂತಿ ಉಂಟಾಗಬಹುದು ಎಂದು ಆರೋಪಿಸಿರುವ ಪುತ್ತಿಯಾ ತಮಿಳಗಂ ಪಕ್ಷವು ಇದೀಗ ಕಮಲ್ ಹಾಸನ್ ಹಾಗೂ ನಿರ್ದೇಶಕರ ವಿರುದ್ಧ ಕೊಯಮತ್ತೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.

2003ರ ವಿವಾದ ಮತ್ತೆ ನೆನಪಿಸಿದ ಪಕ್ಷದ ನಾಯಕ

ಪಕ್ಷದ ನಾಯಕ ಕೃಷ್ಣಸಾಮಿ ಮಾತನಾಡಿ, 2003ರಲ್ಲಿಯೂ ಇದೇ ಹೆಸರಿನ ಸಿನಿಮಾ ಶೀರ್ಷಿಕೆ ವಿವಾದಕ್ಕೆ ಕಾರಣವಾಗಿತ್ತು. ಆಗ ದಕ್ಷಿಣ ತಮಿಳುನಾಡಿನಲ್ಲಿ ಅಶಾಂತಿ ಉಂಟಾದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ದೂರು ಸಲ್ಲಿಸಲಾಗಿತ್ತು. ನಂತರ ಚಿತ್ರದ ಹೆಸರನ್ನು ಬದಲಾಯಿಸಲಾಗಿತ್ತು ಎಂದು ನೆನಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

23 ವರ್ಷಗಳ ಬಳಿಕ ಮತ್ತೆ ಅದೇ ಹೆಸರನ್ನು ಬಳಸುತ್ತಿರುವುದು ಜಾತಿ ಆಧಾರಿತ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ. ನಟನಾಗಿ ಮಾತ್ರವಲ್ಲದೆ ಸಂಸದ ಮತ್ತು ರಾಜಕೀಯ ಪಕ್ಷದ ನಾಯಕರಾಗಿಯೂ ಗುರುತಿಸಿಕೊಂಡಿರುವ ಕಮಲ್ ಹಾಸನ್ ಸಮಾಜದಲ್ಲಿ ಜಾತಿ ವಿಭಜನೆಗೆ ಅವಕಾಶ ಮಾಡಿಕೊಡುವಂತಹ ನಿರ್ಧಾರಗಳಿಂದ ದೂರವಿರಬೇಕು ಎಂದು ಒತ್ತಾಯಿಸಿದ್ದಾರೆ.

ಚಿತ್ರದ ಸಂಭಾಷಣೆಗೂ ಆಕ್ಷೇಪ

ಇನ್ನು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾದ “ರಕ್ತದಿಂದ ಮಾತ್ರವೇ ದ್ವೇಷಕ್ಕೆ ಪ್ರತೀಕಾರ ತೀರಿಸಬಹುದು” ಎಂಬ ಸಂಭಾಷಣೆಗೂ ಪಕ್ಷ ವಿರೋಧ ವ್ಯಕ್ತಪಡಿಸಿದೆ. ಚಿತ್ರದ ಶೀರ್ಷಿಕೆ ಬದಲಾಯಿಸದಿದ್ದರೆ ನಿರ್ಮಾಪಕರ ಮಂಡಳಿಯನ್ನು ಸಂಪರ್ಕಿಸಿ, ಚಿತ್ರದ ನಿರ್ಮಾಣ ಹಾಗೂ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುವುದಾಗಿ ಕೃಷ್ಣಸಾಮಿ ಎಚ್ಚರಿಸಿದ್ದಾರೆ.

ಅಷ್ಟೇ ಅಲ್ಲದೆ, ಕಮಲ್ ಹಾಸನ್ ಮತ್ತು ನಿರ್ದೇಶಕ ಎಸ್.ಯು. ಅರುಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ಇನ್ನೊಂದೆಡೆ, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಸಿನಿಪ್ರಿಯರ ಗಮನ ಸೆಳೆದಿದೆ. ಬಿಳಿ ಕೂದಲು, ಗಡ್ಡ, ಕೈಯಲ್ಲಿ ಗನ್ ಹಿಡಿದಿರುವ ಕಮಲ್ ಹಾಸನ್ ಅವರ ರಗಡ್ ಲುಕ್ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಪೋಸ್ಟರ್‌ನಲ್ಲಿರುವ ‘Revenge can only be settled in blood’ (ರಕ್ತದಿಂದ ಮಾತ್ರ ಪ್ರತೀಕಾರ ತೀರಿಸಬಹುದು) ಎಂಬ ಅಡಿಬರಹ ಚಿತ್ರದಲ್ಲಿ ಸೇಡು ಮತ್ತು ಆಕ್ಷನ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇರಲಿದೆ ಎಂಬ ಸುಳಿವು ನೀಡಿದೆ. ಆರಂಭದಲ್ಲಿ ‘KH237’ ಎಂಬ ತಾತ್ಕಾಲಿಕ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಈ ಸಿನಿಮಾ ಇದೀಗ ‘ಸಂಡಿಯಾರ್’ ಎಂಬ ಶೀರ್ಷಿಕೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಚಿತ್ರಕ್ಕೆ ಎಸ್.ಯು. ಅರುಣ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು, ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರದ ನಿರ್ಮಾಣವನ್ನು ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ಮಾಡುತ್ತಿದೆ. ಟರ್ಮರಿಕ್ ಮೀಡಿಯಾ ಸಹ ನಿರ್ಮಾಣದಲ್ಲಿ ಕೈಜೋಡಿಸಿದೆ.

ಕಮಲ್ ಹಾಸನ್ ಅವರ ಜನ್ಮದಿನದ ಪ್ರಯುಕ್ತ 2026ರ ನವೆಂಬರ್ 7ರಂದು ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಆದರೆ ಚಿತ್ರದ ಸಂಪೂರ್ಣ ಕಥೆ, ಉಳಿದ ತಾರಾಗಣ ಮತ್ತು ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ಹಂಚಿಕೊಂಡಿಲ್ಲ. ಒಂದೆಡೆ ವಿಭಿನ್ನ ಲುಕ್ ಮತ್ತು ಆಕ್ಷನ್ ಕಥಾಹಂದರದಿಂದ ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿಸಿರುವ ‘ಸಂಡಿಯಾರ್’, ಮತ್ತೊಂದೆಡೆ ಶೀರ್ಷಿಕೆ ವಿವಾದದಿಂದ ಸುದ್ದಿಯಲ್ಲಿದೆ. ಹೀಗಾಗಿ ಸಿನಿಮಾ ಬಿಡುಗಡೆಯಾಗುವ ಮುನ್ನವೇ ತಮಿಳುನಾಡಿನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular