ಇಸ್ರೇಲ್ ಹಾಗೂ ಅಮೆರಿಕಾ ಜಂಟಿ ದಾಳಿಗೆ ಇರಾನ್‌ನ ಪರಮೋಚ್ಛ ನಾಯಕ ಅಯಾತುಲ್ಲಾ ಅಲಿ ಖಾಮಿನೈ ಹತ್ಯೆಯಾದ ಬೆನ್ನಲ್ಲೇ ಇರಾನ್ ಸಹ ಇಸ್ರೇಲ್ ಮೇಲೆ ದಾಳಿಗಳನ್ನು ಆರಂಭಿಸಿತ್ತು.
ಈ ಬೆಳವಣಿಗೆಗೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಸುದ್ದಿ ಹೊರಬಂದಿದ್ದು, ನಿನ್ನೆ ( ಮಾರ್ಚ್ 1 ) ಇರಾನ್‌ನ ರಾಜಧಾನಿ ಟೆಹ್ರಾನ್‌ನ ಮೇಲೆ ಇಸ್ರೇಲ್ ಹಾಗೂ ಅಮೆರಿಕಾ ದಾಳಿ ನಡೆಸಿದ್ದು, ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಗಾಂಧಿ ಆಸ್ಪತ್ರೆ ಮೇಲೂ ಸಹ ದಾಳಿಯನ್ನು ನಡೆಸಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಆಸ್ಪತ್ರೆ ಮೇಲೆ ದಾಳಿ ನಡೆದಿದ್ದನ್ನು ಕಂಡ ಇಬ್ಬರು ಪ್ರತ್ಯಕ್ಷದರ್ಶಿಗಳು ಕೂಡಲೇ ಕರೆ ಮಾಡಿ ವಿಷಯ ಮುಟ್ಟಿಸಿದ ಕಾರಣ ಭಾರೀ ಅಪಾಯ ತಪ್ಪಿದ್ದು, ಕೂಡಲೇ ರೋಗಿಗಳನ್ನು ಕಟ್ಟಡದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದಾಳಿಗೊಳಗಾದ ಆಸ್ಪತ್ರೆಯ ಪರಿಸ್ಥಿತಿಯ ವಿಡಿಯೊಗಳು ಹರಿದಾಡುತ್ತಿವೆ.ಸಂಬಂಧಿಕರು ಆಸ್ಪತ್ರೆಗೆ ದಾಖಲಾಗಿದ್ದ ತಮ್ಮವರನ್ನು ಬೇರೆಡೆಗೆ ಕರೆದೊಯ್ಯಲು ಹರಸಾಹಸಪಟ್ಟಿದ್ದಾರೆ.
ಇನ್ನು ತಮ್ಮ ಪರಮೋಚ್ಛ ನಾಯಕ ಖಾಮಿನೈ ಹತ್ಯೆಗೆ ಪ್ರತೀಕಾರದ ದಾಳಿ ನಡೆಸಿದ ಇರಾನ್ 9 ಮಂದಿಯನ್ನು ಹತ್ಯೆಗೈದಿದೆ.
ಇನ್ನು ಇರಾನ್ ಮೇಲಿನ ದಾಳಿಯನ್ನು ರಷ್ಯಾ ಖಂಡಿಸಿದ್ದು, ಇದೊಂದು ಅಪ್ರಚೋದಿತ ಶಸಸ್ತ್ರ ಆಕ್ರಮಣ ಎಂದು ಕಿಡಿಕಾರಿದೆ. ಚೀನಾ ಸಹ ಪ್ರತಿಕ್ರಿಯೆ ನೀಡಿದ್ದು, ಇರಾನ್‌ನ ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದಿದೆ.

