ನಿನ್ನೆ ( ಮಾರ್ಚ್ 8 ) ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಭಾರತದ ಐತಿಹಾಸಿಕ ಜಯಕ್ಕೆ ಸಾಕ್ಷಿಯಾಯಿತು.
ಐಸಿಸಿ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲ್ಯಾಂಡ್ ವಿರುದ್ಧ 96 ರನ್ ಅಂತರದ ಬೃಹತ್ ಗೆಲುವು ದಾಖಲಿಸುವುದರ ಮೂಲಕ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.
ಈ ಜಯದೊಂದಿಗೆ ಟೂರ್ನಿಗೆ ತೆರೆ ಬಿದ್ದಿದ್ದು, ಟೂರ್ನಿಯಲ್ಲಿ ದಾಖಲಾದ ಹಲವಾರು ದಾಖಲೆಗಳ ಬಗ್ಗೆ ಚರ್ಚೆ ಏರ್ಪಟ್ಟಿದೆ. ಅದರಲ್ಲೂ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ರನ್ ಬೃಹತ್ ದಾಖಲೆ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.
ಹೌದು, 2014ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 319 ರನ್ ಬಾರಿಸಿ ಟೂರ್ನಿ ಒಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ನಂತರ ನಡೆದ ಟೂರ್ನಿಗಳಲ್ಲಿ ಯಾರು ಸಹ ಬ್ರೇಕ್ ಮಾಡಿರಲಿಲ್ಲ. ಇನ್ನು ಈ ಬಾರಿಯ ಟೂರ್ನಿ ಆರಂಭವಾಗುವ ಮುನ್ನ ಸಹ ಕೊಹ್ಲಿ ದಾಖಲೆಯನ್ನು ಯಾರು ಸಹ ಬ್ರೇಕ್ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ ಈ ದಾಖಲೆಯನ್ನು ಈ ಬಾರಿ ಮೂವರು ಆಟಗಾರರು ಮುರಿದು ಹಾಕಿದ್ದಾರೆ. ಹೌದು, ಪಾಕಿಸ್ತಾನದ ಆಟಗಾರ ಫರ್ಹಾನ್, ಟಿಮ್ ಸೈಫರ್ಟ್ ಹಾಗೂ ಸಂಜು ಸಾಮ್ಸನ್ ಈ ದಾಖಲೆಯನ್ನು ಮುರಿದು ಹಾಕಿದ್ದಾರೆ. ಫರ್ಹನ್ 383 ರನ್ ಕಲೆ ಹಾಕಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರೆ, ನ್ಯೂಜಿಲೆಂಡ್ ನ ಟಿಮ್ ಸೈಫರ್ಟ್ 326 ಹಾಗೂ ಭಾರತದ ಸಂಜು ಸ್ಯಾಮ್ಸನ್ 321 ರನ್ ಬಾರಿಸಿದ್ದಾರೆ.
ಇನ್ನು ಕೊಹ್ಲಿ 6 ಪಂದ್ಯಗಳಲ್ಲಿ 319 ರನ್ ಬಾರಿಸಿದ್ದರು. ಫರ್ಹಾನ್ 7 ಪಂದ್ಯಗಳಲ್ಲಿ 383, ಸೈಫರ್ಟ್ 9 ಪಂದ್ಯಗಳಲ್ಲಿ 326 ಹಾಗೂ ಸಂಜು ಸ್ಯಾಮ್ಸನ್ ಕೇವಲ 5 ಪಂದ್ಯಗಳಲ್ಲಿ 321 ರನ್ ಬಾರಿಸಿದ್ದಾರೆ.

