ಚಿಕ್ಕಬಳ್ಳಾಪುರ: ಬಿ ರಿಪೋರ್ಟ್ ಹಾಕಲು 70 ಸಾವಿರ ರೂ. ಲಂಚ ಪಡೆದಿದ್ದ ಪಿಎಸ್ಐ ಮತ್ತು ಎಎಸ್ಐ ಜಾಮೀನು ರದ್ದುಪಡಿಸಲಾಗಿದೆ.
70 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪಿಎಸ್ಐ ಶರಣಪ್ಪ ಮತ್ತು ಎಎಸ್ಐ ಟಿ. ವೆಂಕಟೇಶ್ ಅವರ ಜಾಮೀನನ್ನು ಜಿಲ್ಲಾ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ರದ್ದು ಮಾಡಿದೆ.
ಮಾರ್ಚ್ 3ರಂದು ಸಂಜೆ ಕನ್ನಡ ಭವನದ ಸಮೀಪ 70 ಸಾವಿರ ರೂ. ಲಂಚ ಪಡೆಯುವಾಗ ಎಎಸ್ಐ ವೆಂಕಟೇಶಪ್ಪ, ನಗರ ಹೊರವಲಯದ ಚಿತ್ರಾವತಿಯ ಬಳಿ ಶರಣಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಮಾರ್ಚ್ 4ರಂದು ಬೆಳಿಗ್ಗೆ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ಅವರಿಗೆ ಜಾಮೀನು ಮಂಜೂರು ಮಾಡಲಾಗಿತ್ತು.
ಕೆಲವೇ ಗಂಟೆಗಳಲ್ಲಿ ಜಾಮೀನು ಮಂಜೂರಾಗಿದ್ದು, ನ್ಯಾಯಾಂಗ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಜಾಮೀನು ನೀಡಿದ್ದಕ್ಕೆ ಲೋಕಾಯುಕ್ತ ಪೊಲೀಸರು ಅಕ್ಷೇಪ ವ್ಯಕ್ತಪಡಿಸಿದ್ದರು. ಮಾರ್ಚ್ 7ರಂದು ನ್ಯಾಯಾಧೀಶರಾದ ಶಾರದಾ ಅವರು ಮತ್ತೆ ಪ್ರಕರಣದ ವಿಚಾರಣೆ ನಡೆಸಿ ಸೋಮವಾರ ತೀರ್ಪು ನೀಡುವುದಾಗಿ ಪ್ರಕಟಿಸಿದ್ದು, ಸೋಮವಾರ ಜಾಮೀನು ರದ್ದುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಮಾನತು ಮಾಡಿದ್ದಾರೆ.

