ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 4 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಈ ಸುತ್ತಿನಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಬಾರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿ ಇಂಗ್ಲೆಂಡ್ ತಂಡಕ್ಕೆ 160 ರನ್‌ಗಳ ಸಾಧಾರಣ ಗುರಿಯನ್ನು ನೀಡಿದೆ. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಕೇವಲ 58 ರನ್‌ಗೆ ತನ್ನ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ ಟ್ಯಾಮ್ ಬ್ಯಾಂಟನ್ ಹಾಗೂ ಸ್ಯಾಮ್ ಕರನ್ ಜತೆಯಾಟ ಮತ್ತು ಅಂತಿಮ ಹಂತದಲ್ಲಿ ವಿಲ್ ಜ್ಯಾಕ್ಸ್ ಹಾಗೂ ರೆಹಾನ್ ಅಹ್ಮದ್ ಅಬ್ಬರದ ಆಟದ ನೆರವಿನಿಂದ 19.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿ ಸೋಲುವ ಪಂದ್ಯವನ್ನು ಗೆದ್ದುಬೀಗಿದೆ.
ಈ ಸೋಲಿನ ಮೂಲಕ ನ್ಯೂಜಿಲೆಂಡ್ ತಂಡ ನೇರವಾಗಿ ಸೆಮಿಫೈನಲ್ ತಲುಪುವ ಅವಕಾಶವನ್ನು ಕೈತಪ್ಪಿಸಿಕೊಂಡಿದ್ದು, ಇದೀಗ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ಫಲಿತಾಂಶಕ್ಕಾಗಿ ಕಾಯುವ ಪರಿಸ್ಥಿತಿ ಬಂದಿದೆ. ಇನ್ನು ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್ ಗೆಲುವಿನಿಂದ ಸಂತಸವಾಗಿದ್ದು, ಸೆಮಿಫೈನಲ್ ತಲುಪಲು ನ್ಯೂಜಿಲೆಂಡ್ ತಂಡಕ್ಕಿಂತ ಹೆಚ್ಚಿನ ನೆಟ್ ರನ್‌ರೇಟ್ ಬರುವ ಹಾಗೆ ಲಂಕಾ ತಂಡವನ್ನು ಸೋಲಿಸಿದರೆ ಮಾತ್ರ ಸೆಮಿಫೈನಲ್ ಟಿಕೆಟ್ ಸಿಗಲಿದೆ.
ನ್ಯೂಜಿಲೆಂಡ್ ಇನ್ನಿಂಗ್ಸ್: ಪರ ಆರಂಭಿಕರಾಗಿ ಕಣಕ್ಕಿಳಿದ ಟಿಮ್ ಸೈಫರ್ಟ್ ಹಾಗೂ ಫಿನ್ ಅಲೆನ್ ಜೋಡಿ 6.6 ಓವರ್‌ಗಳಲ್ಲಿ 64 ರನ್‌ಗಳ ಜತೆಯಾಟವನ್ನು ಉತ್ತಮ ಆರಂಭವನ್ನು ಕಟ್ಟಿಕೊಟ್ಟಿತು. ಆದರೆ ನಂತರದ ಓವರ್‌ಗಳಲ್ಲಿ ದೊಡ್ಡ ಮೊತ್ತಕ್ಕೆ ಬೇಕಾದ ಪ್ರದರ್ಶನ ತಂಡದ ಇತರೆ ಆಟಗಾರರಿಂದ ಬರಲಿಲ್ಲ. ಸೈಫರ್ಟ್ 35 ರನ್ ಗಳಿಸಿದರೆ, ಫಿನ್ ಅಲೆನ್ 29 ರನ್ ಗಳಿಸಿದರು. ಇನ್ನುಳಿದಂತೆ ರಚಿನ್ ರವೀಂದ್ರ 11, ಗ್ಲೆನ್ ಫಿಲಿಪ್ಸ್ 39, ಮಾರ್ಕ್ ಚಾಂಪ್‌ಮನ್ 15, ಡ್ಯಾರಿಲ್ ಮಿಚೆಲ್ 3, ಕೋಲ್ ಮೆಕ್‌ಕೋನ್ಷಿ 14, ನಾಯಕ ಮಿಚೆಲ್ ಸ್ಯಾಂಟ್ನರ್ ಅಜೇಯ 9 ರನ್ ಹಾಗೂ ಮ್ಯಾಟ್ ಹೆನ್ರಿ ಅಜೇಯ 1 ರನ್ ಕಲೆಹಾಕಿದರು.
ಇಂಗ್ಲೆಂಡ್ ಪರ ಆದಿಲ್ ರಶೀದ್, ವಿಲ್ ಜ್ಯಾಕ್ಸ್, ರೆಹಾನ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರೆ, ಲಿಯಾಮ್ ಡಾಸನ್ ಒಂದು ವಿಕೆಟ್ ಪಡೆದರು.
ಇಂಗ್ಲೆಂಡ್ ಇನ್ನಿಂಗ್ಸ್: ಕಿವೀಸ್ ನೀಡಿದ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಕೇವಲ 2 ರನ್‌ಗೆ ತನ್ನ ಆರಂಭಿಕರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಫಿಲ್ ಸಾಲ್ಟ್ 2 ರನ್ ಗಳಿಸಿದರೆ, ಜೋಸ್ ಬಟ್ಲರ್ ಡಕ್‌ಔಟ್ ಆದರು. ಬಳಿಕ ಕಣಕ್ಕಿಳಿದ ಹ್ಯಾರಿ ಬ್ರೂಕ್ ಹಾಗೂ ಜೇಕಬ್ ಬೆಥೆಲ್ ಮೂರನೇ ವಿಕೆಟ್‌ಗೆ 48 ರನ್‌ಗಳ ಜತೆಯಾಟವನ್ನಾಡಿ ತಂಡಕ್ಕೆ ಸುಧಾರಣೆ ತಂದರಾದರೂ ಒಬ್ಬರಾದ ಮೇಲೆ ಒಬ್ಬರು ವಿಕೆಟ್ ಒಪ್ಪಿಸಿದ ಕಾರಣ ಮತ್ತೆ ತಂಡ ಹಿನ್ನಡೆ ಅನುಭವಿಸಿತು. ಹ್ಯಾರಿ ಬ್ರೂಕ್ 26 ರನ್ ಕಲೆಹಾಕಿದರೆ ಬೆಥೆಲ್ 21 ರನ್ ಗಳಿಸಿದರು. ಅಲ್ಲಿಗೆ ಇಂಗ್ಲೆಂಡ್ ಕೇವಲ 58 ರನ್‌ಗೆ ತನ್ನ ನಾಲ್ಕು ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಬಳಿಕ ಒಂದಾದ ಟಾಮ್ ಬ್ಯಾಂಟನ್ ಮತ್ತು ಸಾಮ್ ಕರನ್ ಜೋಡಿ 42 ರನ್‌ಗಳ ಜತೆಯಾಟವಾಡಿತಾದರೂ 35 ಎಸೆತಗಳನ್ನು ಆಡಿದ್ದರಿಂದ ಅಗತ್ಯ ರನ್‌ರೇಟ್ ಪ್ರಮಾಣ ಹೆಚ್ಚಾಗಿತ್ತು. ನಿಧಾನವಾಗಿ ಆಡುವುದನ್ನು ಬಿಟ್ಟು ದೊಡ್ಡ ಹೊಡೆತಗಳನ್ನು ಬಾರಿಸಬೇಕಾದ ಅಗತ್ಯವಿದ್ದಾಗಲೇ ಟಾಮ್ ಬ್ಯಾಂಟನ್ 33 ಹಾಗೂ ಸ್ಯಾಮ್ ಕರನ್ 24 ರನ್‌ಗೆ ಔಟ್ ಆದರು. ಈ ಸಂದರ್ಭದಲ್ಲಿ ಒಂದಾದ ವಿಲ್ ಜ್ಯಾಕ್ಸ್ ಹಾಗೂ ರೆಹಾನ್ ಅಹ್ಮದ್ ಜೋಡಿ ಕೇವಲ 16 ಎಸೆತಗಳಲ್ಲಿ ಬರೋಬ್ಬರಿ 44 ರನ್‌ಗಳನ್ನು ಅದೂ ಸಹ ಡೆತ್ ಓವರ್‌ನಲ್ಲಿ ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನೇನು ಕಿವೀಸ್ ಗೆಲುವು ಪಕ್ಕಾ ಎನ್ನುವ ಸಂದರ್ಭದಲ್ಲಿ ಈ ಇಬ್ಬರು ಅಬ್ಬರಿಸಿ ಪಂದ್ಯವನ್ನು ಇಂಗ್ಲೆಂಡ್ ಕೈನಿಂದ ಕಿತ್ತುಕೊಂಡರು. ವಿಲ್ ಜ್ಯಾಕ್ಸ್ 18 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 32 ರನ್ ಬಾರಿಸಿದರೆ, ರೆಹಾನ್ ಅಹ್ಮದ್ 7 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸ್ಪೋಟಕ ಸಿಕ್ಸರ್ ಚಚ್ಚಿ ಅಜೇಯ 19 ರನ್ ಬಾರಿಸಿದರು.
ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ ಮೂರು ವಿಕೆಟ್, ಗ್ಲೆನ್ ಫಿಲಿಪ್ಸ್, ಲಾಕಿ ಫರ್ಗ್ಯೂಸನ್ ಹಾಗೂ ಮ್ಯಾಟ್ ಹೆನ್ರಿ ತಲಾ ಒಂದೊಂದು ವಿಕೆಟ್ ಪಡೆದರು.

