ಮೈಸೂರು: ಮೈಸೂರಿನ ಟಿ ನರಸೀಪುರದಲ್ಲಿ ನಡೆಯಲಿರುವ ಗಣೇಶ ಮೆರವಣಿಗೆಯ ಕುರಿತು ಇನ್ಸ್‌ಪೆಕ್ಟರ್ ಧನಂಜಯ ಅವರು ನೀಡಿದ ಹೇಳಿಕೆ ರಾಜಕೀಯ ಮತ್ತು ಧಾರ್ಮಿಕ ಚರ್ಚೆಗಳಿಗೆ ಕಾರಣವಾಗಿವೆ. ಈ ನಡುವೆ ಟಿ.ನರಸೀಪುರದಲ್ಲಿ ಗಣೇಶೋತ್ಸವ ಹಾಗೂ ಬೃಹತ್ ಶೋಭಾಯಾತ್ರೆಗೆ ಸಿದ್ಧತೆ ಆರಂಭವಾಗಿದೆ.
ಹಿಂದೂ ಜಾಗರಣ ವೇದಿಕೆ ಇನ್ಸ್ ಪೆಕ್ಟರ್ ಧನಂಜಯ್ ಗೆ ಸವಾಲೊಡ್ಡಿದೆ. ಟಿ. ನರಸೀಪುರದಲ್ಲಿ ಮೊದಲ ಬಾರಿಗೆ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಇದು ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿದೆ. ಹಿಂದೂ ಜಾಗರಣ ವೇದಿಕೆ ಈ ಪ್ರತಿಷ್ಠಾಪನೆಯನ್ನು ಆಯೋಜಿಸಿದೆ. ಧಾರ್ಮಿಕ ಗುರುಗಳು, ಬಿಜೆಪಿ ನಾಯಕರು ಮತ್ತು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಸೆಪ್ಟೆಂಬರ್ 18ರಂದು ಭವ್ಯ ಮೆರವಣಿಗೆ ನಡೆಸುವುದಾಗಿ ಹಿಂದೂ ಜಾಗರಣ ವೇದಿಕೆ ಘೋಷಿಸಿದೆ. ಮೆರವಣಿಗೆಯಲ್ಲಿ 5,000 ಹಿಂದೂ ಕಾರ್ಯಕರ್ತರನ್ನು ಸೇರಿಸುತ್ತೇವೆ. ಇನ್ಸ್‌ಪೆಕ್ಟರ್ ಧನಂಜಯ ಅವರು ಮೆರವಣಿಗೆ ದೃಶ್ಯಗಳನ್ನು ಕಣ್ತುಂಬಿಕೊಳ್ಳಲಿ ಎಂದು ಹಿಂದೂ ಜಾಗರಣ ವೇದಿಕೆಯ ಮಹೇಶ್ ಸವಾಲು ಹಾಕಿದ್ದಾರೆ.
ಮಸೀದಿ ಇರುವ ಲಿಂಕ್ ರಸ್ತೆಯಲ್ಲಿ ಮೆರವಣಿಗೆ ಬಂದರೆ ಗ್ರಹಚಾರ ಬಿಡಿಸುತ್ತೇನೆ. ಮಸಿದಿ ರಸ್ತೆಯಲ್ಲಿ ಯಾವ ಕಾರಣಕ್ಕೂ ಮೆರವಣಿಗೆ ಹೋಗಬಾರದು ಎಂದು ಇನ್‌ಸ್ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿರುವ ಹಿಂದೂ ಜಾಗರಣ ವೇದಿಕೆ, ಸೆಪ್ಟೆಂಬರ್ 18ರಂದು ಅದೇ ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಭವ್ಯ ಶೋಭಾಯಾತ್ರೆ ನಡೆಸುವುದಾಗಿ ಘೋಷಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಜಾಗರಣ ವೇದಿಕೆಯ ಮುಖಂಡ ಮಹೇಶ್, ಇನ್ಸ್‌ಪೆಕ್ಟರ್ ಧನಂಜಯ್ ಅವರ ಸವಾಲನ್ನು ನಾವು ಸ್ವೀಕರಿಸಿದ್ದೇವೆ. ಸೆಪ್ಟೆಂಬರ್ 18ರಂದು ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಗಣೇಶ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ಈ ಶೋಭಾಯಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ 5 ಸಾವಿರಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಐತಿಹಾಸಿಕ ಮೆರವಣಿಗೆಯನ್ನು ಇನ್‌ಸ್ಪೆಕ್ಟರ್ ಧನಂಜಯ್ ಅವರು ಕಣ್ತುಂಬ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಒಟ್ಟಾರೆ ಟಿ.ನರಸಿಪುರದಲ್ಲಿ ಬೃಹತ್ ಶೋಭಾಯಾತ್ರೆಗೆ ಹಿಂದೂ ಜಾಗರಣಾ ವೇದಿಕೆ ಸಜ್ಜಾಗಿದ್ದು, ಮುಂಜಾಗೃತಾ ಕ್ರಮವಾಗಿ ಪೊಲೀಸರು ಎಲ್ಲೆಡೆ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಗಣೇಶ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಟಿ. ನರಸೀಪುರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಇನ್ಸ್‌ಪೆಕ್ಟರ್ ಧನಂಜಯ್ ಶಾಂತಿ ಸಭೆ ನಡೆಸಿದ್ದರು. ಗಣೇಶ ಸಮಿತಿ ಯುವಕರನ್ನು ಕರೆದು, ಮಸೀದಿ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋಗಬಾರದು ಎಂದು ಎಚ್ಚರಿಸಿದ್ದರು. ಲಿಂಕ್ ರಸ್ತೆಯಲ್ಲಿ ಮೆರವಣಿಗೆ ಹೋದರೆ, ಮಸೀದಿ ಮುಂದೆ ಮೆರವಣಿಗೆ ನಿಲ್ಲಿಸಿ ಪಟಾಕಿ ಸಿಡಿಸಿ, ಕುಣಿಯುವುದು ಮಾಡಿದರೆ ಗ್ರಹಚಾರ ಬಿಡಿಸುತ್ತೇನೆ. ಬೇರೆ ರಸ್ತೆಗಳ ಮೂಲ ಹೋಗಬೇಕು. ನಾವು ಯಾವ ರಸ್ತೆ ಮಾರ್ಗಗಳನ್ನು ಸೂಚಿಸುತ್ತೇವೆಯೋ ಅದೇ ಮಾರ್ಗದಲ್ಲಿ ಮೆರವಣಿಗೆ ಸಾಗಬೇಕು ಎಂದು ಹೇಳಿದ್ದರು.
ಅನಗತ್ಯವಾಗಿ ಮಸೀದಿಗಳ ಮುಂದೆ ಪಟಾಕಿ ಸಿಡಿಸುವುದು, ಮಸೀದಿಗಳ ಮುಂದೆ ಹೋಗಿ ಮೆರವಣಿಗೆ ನಿಲ್ಲಿಸಿ, ಕುಣಿಯುವುದು, ಗಲಭೆ ಸೃಷ್ಟಿಸುವುದು ಕಂಡುಬಂದರೆ ಅಂತವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಾರಿ ಇಂತಹ ಘಟನೆ ಕಂಡುಬಂದರೆ ಹೇಳುವುದಿಲ್ಲ ಮಾಡಿ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ನಮ್ಮ ಹಬ್ಬವನ್ನು ನೋಡಿ ಬೇರೆಯವರು ಗೌರವ ಕೊಡಬೇಕು. ಯಾವ ಧರ್ಮವಾದರೇನು? ಅವರ ಧರ್ಮ ಅವರಿಗೆ ಹೆಚ್ಚು. ಗಣೇಶ ಹಬ್ಬದಂದು ಮಸೀದಿ ಮುಂದೆ ಹೋಗಿ ಕುಣಿಯಬೇಕೆಂದು ಎಲ್ಲಿಯೂ ಹೇಳಿಲ್ಲ. ನಮ್ಮ ಹಬ್ಬದ ಆಚರಣೆ ನೋಡಿ ಇತರರು ಗೌರವಿಸಲಿ ಎಂದು ಹೇಳಿಕೆ ನೀಡಿದ್ದರು.
ಲಿಂಕ್ ರಸ್ತೆಯಲ್ಲಿರುವ ಮಸೀದಿ ಬಳಿ ಗಣೇಶ ಮೆರವಣಿಗೆ ಸಾಗದಂತೆ ಷರತ್ತು ವಿಧಿಸಿದ್ದು, ಇದನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಇನ್ಸ್‌ಪೆಕ್ಟರ್ ಧನಂಜಯ್ ಸ್ಪಷ್ಟ ಎಚ್ಚರಿಕೆ ನೀಡಿದ್ದರು. ನನ್ನ ಗಮನಕ್ಕೆ ಬಂದರೆ ಹೇಳಲ್ಲ, ಮಾಡಿ ತೋರಿಸ್ತೀನಿ ಎಂದು ಎಚ್ಚರಿಕೆ ನೀಡಿದ್ದರು. ಇನ್ಸ್ ಪೆಕ್ಟರ್ ಧನಂಜಯ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇನ್ಸ್ ಪೆಕ್ಟರ್ ಅವರ ಈ ನಡೆಗೆ ವಿಪಕ್ಷ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಇನ್ಸ್ ಪೆಕ್ಟರ್ ಧನಂಜಯ್ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದರು.

