HomeLatest Newsಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗೆ ನೂತನ ಸಿಇಒ ಆಗಿ ನಂದಿತಾ ಸಿನ್ಹಾ ನೇಮಕ, ಮಾಜಿ ಮಿಂತ್ರಾ ಮುಖ್ಯಸ್ಥೆಗೆ ಹೊಸ...

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗೆ ನೂತನ ಸಿಇಒ ಆಗಿ ನಂದಿತಾ ಸಿನ್ಹಾ ನೇಮಕ, ಮಾಜಿ ಮಿಂತ್ರಾ ಮುಖ್ಯಸ್ಥೆಗೆ ಹೊಸ ಜವಾಬ್ದಾರಿ

ಭಾರತದ ವೇಗವಾಗಿ ಬೆಳೆಯುತ್ತಿರುವ ಕ್ವಿಕ್ ಕಾಮರ್ಸ್ ಕ್ಷೇತ್ರದಲ್ಲಿ ಮಹತ್ವದ ನಾಯಕತ್ವ ಬದಲಾವಣೆಯಾಗಿದೆ. ದಿನಸಿ ಹಾಗೂ ದಿನಬಳಕೆಯ ವಸ್ತುಗಳನ್ನು ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO)ಯಾಗಿ ಮಾಜಿ ಮಿಂತ್ರಾ ಮುಖ್ಯಸ್ಥೆ ನಂದಿತಾ ಸಿನ್ಹಾ ಅವರನ್ನು ನೇಮಕ ಮಾಡಿದೆ. ಆಗಸ್ಟ್ 3, 2026ರಿಂದ ಈ ನೇಮಕ ಜಾರಿಗೆ ಬರಲಿದ್ದು, ಹಾಲಿ ಸಿಇಒ ಅಮಿತೇಶ್ ಝಾ ಅವರ ಸ್ಥಾನವನ್ನು ಅವರು ಅಲಂಕರಿಸಲಿದ್ದಾರೆ. ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ಕ್ಷೇತ್ರದಲ್ಲಿ ಇದು ಮಹತ್ವದ ನಾಯಕತ್ವ ಬದಲಾವಣೆಯಾಗಿ ಗಮನ ಸೆಳೆದಿದೆ.

ಯಾರಿವರು ನಂದಿತಾ ಸಿನ್ಹಾ?

ನಂದಿತಾ ಅವರು ಇದಕ್ಕೂ ಮುನ್ನ ಪ್ರಸಿದ್ಧ ಫ್ಯಾಷನ್ ಇ-ಕಾಮರ್ಸ್ ತಾಣ ಮಿಂತ್ರಾದ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ತೀವ್ರ ಪೈಪೋಟಿಯ ಮಾರುಕಟ್ಟೆಯಲ್ಲೂ ಮಿಂತ್ರಾವನ್ನು 2024ರಲ್ಲಿ ಲಾಭದ ಹಾದಿಗೆ ತಂದ ಶ್ರೇಯ ಇವರಿಗೆ ಸಲ್ಲುತ್ತದೆ.

ಫ್ಲಿಪ್‌ಕಾರ್ಟ್, ಬ್ರಿಟಾನಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್‌ನಂತಹ ದೈತ್ಯ ಕಂಪನಿಗಳಲ್ಲಿ ನಾಯಕತ್ವದ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಇವರು, ಕನ್ಸೂಮರ್‌ ಇಂಟರ್ನೆಟ್, ಫ್ಯಾಷನ್ ಮತ್ತು ಎಫ್‌ಎಂಸಿಜಿ ವಲಯದಲ್ಲಿ ಬರೋಬ್ಬರಿ 20 ವರ್ಷಗಳ ಅಪಾರ ಅನುಭವ ಹೊಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮಹತ್ವದ ಬದಲಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ವಿಗ್ಗಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಗ್ರೂಪ್ ಸಿಇಒ ಶ್ರೀಹರ್ಷ ಮಜೇಟಿ, “ಭಾರತದ ಅತ್ಯಂತ ಯಶಸ್ವಿ ಕನ್ಸೂಮರ್ ಇಂಟರ್ನೆಟ್ ನಾಯಕಿಯರಲ್ಲಿ ಒಬ್ಬರಾಗಿರುವ ನಂದಿತಾ ಅವರನ್ನು ಇನ್‌ಸ್ಟಾಮಾರ್ಟ್ ಸಿಇಒ ಆಗಿ ಸ್ವಾಗತಿಸಲು ನನಗೆ ಅತೀವ ಸಂತೋಷವಾಗುತ್ತಿದೆ. ಅವರ ದೂರದೃಷ್ಟಿ ಮತ್ತು ಗ್ರಾಹಕಸ್ನೇಹಿ ಕಾರ್ಯವೈಖರಿಯಿಂದ ಇನ್‌ಸ್ಟಾಮಾರ್ಟ್ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು,

ಇದೇ ವೇಳೆ ನಿರ್ಗಮಿತ ಸಿಇಒಗೆ ಶುಭ ಹಾರೈಸಿದ ಅವರು, “ಇನ್‌ಸ್ಟಾಮಾರ್ಟ್‌ನ ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿ ಅಮಿತೇಶ್ ಝಾ ಅವರು ಅತ್ಯುತ್ತಮ ನಾಯಕತ್ವ ಒದಗಿಸಿದ್ದಾರೆ. ಸಂಸ್ಥೆಯನ್ನು ಬಲವಾದ ಸ್ಥಿತಿಗೆ ತಂದಿರುವ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ,” ಎಂದರು.

ನೂತನ ಸಿಇಒ ನಂದಿತಾ ಸಿನ್ಹಾ ಹರ್ಷ

ತಮ್ಮ ಹೊಸ ಜವಾಬ್ದಾರಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ ನಂದಿತಾ ಸಿನ್ಹಾ, “ಇನ್‌ಸ್ಟಾಮಾರ್ಟ್ ತಂಡ ಕಟ್ಟಿರುವ ಈ ವ್ಯವಹಾರವನ್ನು ನಾನು ಮೊದಲಿನಿಂದಲೂ ಮೆಚ್ಚಿದ್ದೇನೆ. ಇದೊಂದು ಗ್ರಾಹಕರಿಗೆ ಮೊದಲ ಆದ್ಯತೆ ನೀಡುವ ಅತ್ಯುತ್ತಮ ಸಂಸ್ಥೆ. ಭಾರತೀಯರು ತಮ್ಮ ದೈನಂದಿನ ಅಗತ್ಯಗಳಿಗೆ ನಡೆಸುವ ಶಾಪಿಂಗ್ ಕೇಂದ್ರಿತವಾಗಿ ಇನ್‌ಸ್ಟಾಮಾರ್ಟ್ ಬೆಳೆದಿದೆ. ಸಂಸ್ಥೆಯ ಮುಂದಿನ ಬೆಳವಣಿಗೆ ದೃಷ್ಟಿಯಿಂದ ನಮ್ಮ ತಂಡ ಮತ್ತು ಪಾಲುದಾರರೊಂದಿಗೆ ಕೆಲಸ ಮಾಡಲು ನಾನು ಉತ್ಸುಕಳಾಗಿದ್ದೇನೆ” ಎಂದು ಹೇಳಿದರು.

ನಂದಿತಾ ಸಿನ್ಹಾ ಅವರ ಆಗಮನದಿಂದ ಇನ್‌ಸ್ಟಾಮಾರ್ಟ್ ತನ್ನ ಗ್ರಾಹಕ ಸೇವೆಯನ್ನು ಮತ್ತಷ್ಟು ಚುರುಕುಗೊಳಿಸುವ ಜೊತೆಗೆ, ಲಾಭದಾಯಕತೆಯ ದೃಷ್ಟಿಯಿಂದ ಹೊಸ ಮೈಲಿಗಲ್ಲು ತಲುಪುವ ನಿರೀಕ್ಷೆ ಇದೆ.

ಆಗಸ್ಟ್ 2020ರಲ್ಲಿ ಆರಂಭವಾದ ಇನ್‌ಸ್ಟಾಮಾರ್ಟ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬೃಹತ್ ಡೆಲಿವರಿ ಪಡೆಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ದೇಶದ 131ಕ್ಕೂ ಹೆಚ್ಚು ನಗರಗಳಲ್ಲಿ ದಿನಸಿ ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳನ್ನು ಕ್ಷಿಪ್ರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular