ಮಕ್ಕಳು ತರಕಾರಿ ತಿನ್ನಲು ಹಠ ಮಾಡುತ್ತಿದ್ದಾರೆಯೇ? ಅಥವಾ ನೀವು ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ದಲ್ಲಿ, ನಿಮ್ಮ ಅಡುಗೆಮನೆಯಲ್ಲಿ ಈ ಬಾರಿ ಟ್ರೈ ಮಾಡಿ ಬ್ರೊಕೊಲಿ ದೋಸೆ.
ವಿಟಮಿನ್ ಸಿ ಸಮೃದ್ಧವಾಗಿರುವ ಈ ದೋಸೆ ಕೇವಲ ರುಚಿಯಷ್ಟೇ ಅಲ್ಲ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪವರ್‌ಫುಲ್ ಉಪಹಾರವೂ ಹೌದು.ಬ್ರೊಕೊಲಿಯನ್ನು ನೇರವಾಗಿ ಕೊಟ್ಟರೆ ಮಕ್ಕಳು ತಿನ್ನಲು ಇಷ್ಟಪಡದಿರಬಹುದು. ಆದರೆ ದೋಸೆ ರೂಪದಲ್ಲಿ ನೀಡಿದಾಗ ಅದರ ರುಚಿಯ ಜೊತೆಗೆ ಪೋಷಕಾಂಶಗಳೂ ದೇಹ ಸೇರುತ್ತವೆ. ಈ ಬಿಸಿ ದೋಸೆಗೆ ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಪರ್ಫೆಕ್ಟ್ ಕಾಂಬಿನೇಷನ್ ಆಗಿರುತ್ತದೆ
ಬೇಕಾಗುವ ಸಾಮಗ್ರಿಗಳು:
ಬ್ರೊಕೊಲಿ ತುಂಡುಗಳು
ಬಾಂಬೆ ರವೆ – 1 ಕಪ್
ಮೊಸರು – 1 ಕಪ್
ಈರುಳ್ಳಿ, ಹಸಿಮೆಣಸು, ತುರಿದ ಶುಂಠಿ
ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು
ತುಪ್ಪ ಅಥವಾ ಎಣ್ಣೆ
ತಯಾರಿಸುವ ಸುಲಭ ವಿಧಾನ:
ಮೊದಲು ಬ್ರೊಕೊಲಿಯನ್ನು ಉಪ್ಪು ನೀರಿನಲ್ಲಿ ತೊಳೆದು, ಸಣ್ಣಗೆ ಕತ್ತರಿಸಿ ಹಬೆಯಲ್ಲಿ (Steam) ಬೇಯಿಸಿಕೊಳ್ಳಿ.
ಒಂದು ಪಾತ್ರೆಯಲ್ಲಿ ರವೆ, ಮೊಸರು ಮತ್ತು ಸ್ವಲ್ಪ ನೀರು ಸೇರಿಸಿ ಗಂಟಿಲ್ಲದಂತೆ ಕಲಸಿ 15 ನಿಮಿಷ ನೆನೆಯಲು ಬಿಡಿ.
ಈ ಹಿಟ್ಟಿಗೆ ಬೇಯಿಸಿದ ಬ್ರೊಕೊಲಿ (ಪೇಸ್ಟ್ ಅಥವಾ ತುರಿ), ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ, ಶುಂಠಿ, ಜೀರಿಗೆ ಮತ್ತು ಉಪ್ಪು ಸೇರಿಸಿ ಹದವಾಗಿ ಮಿಶ್ರಣ ಮಾಡಿ.
ಬಿಸಿ ಮಾಡಿದ ಪ್ಯಾನ್ ಮೇಲೆ ದೋಸೆಯನ್ನು ತೆಳುವಾಗಿ ಹರಡಿ, ಸುತ್ತಲೂ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿ.
ಎರಡು ಬದಿಗಳು ಕೆಂಪಾಗುವವರೆಗೆ ಬೇಯಿಸಿದರೆ ಬಿಸಿಬಿಸಿ ಬ್ರೊಕೊಲಿ ದೋಸೆ ಸಿದ್ಧ

