ಸಂಜೆ ವೇಳೆ ಅಥವಾ ಮನೆಯಲ್ಲಿ ನಡೆಯುವ ಸಣ್ಣ ಪುಟ್ಟ ಪಾರ್ಟಿಗಳಿಗೆ ಚಿಕನ್ ಕ್ರಿಸ್ಪಿ ಅತ್ಯುತ್ತಮ ಸ್ನ್ಯಾಕ್ಸ್ ಆಗಿದೆ. ಹೊರಗಡೆ ಹೋಟೆಲ್‌ಗಳಲ್ಲಿ ಸಿಗುವಷ್ಟೇ ರುಚಿಯಾಗಿ ಮತ್ತು ಗರಿಗರಿಯಾಗಿ ಮನೆಯಲ್ಲೇ ಅತ್ಯಂತ ಕಡಿಮೆ ಸಮಯದಲ್ಲಿ ಇದನ್ನು ಸಿದ್ಧಪಡಿಸಬಹುದು. ನಾನ್-ವೆಜ್ ಪ್ರಿಯರಿಗೆ ಇದು ಖಂಡಿತವಾಗಿಯೂ ಇಷ್ಟವಾಗುವ ತಿನಿಸು.
ಬೇಕಾಗುವ ಸಾಮಗ್ರಿಗಳು: ಸುಮಾರು 300 ಗ್ರಾಂ ಮೂಳೆ ಇಲ್ಲದ (ಬೋನ್‌ಲೆಸ್) ಚಿಕನ್ ತುಂಡುಗಳು, ಕಾರ್ನ್‌ಫ್ಲೋರ್, ಮೈದಾ ಹಿಟ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅಚ್ಚಖಾರದ ಪುಡಿ, ಕಾಳುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸೋಯಾ ಸಾಸ್ ಅವಶ್ಯಕತೆ ಇರುತ್ತದೆ. ಕರಿಯಲು ಎಣ್ಣೆ ಹಾಗೂ ಒಗ್ಗರಣೆಗಾಗಿ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಚಿಲ್ಲಿ ಫ್ಲೇಕ್ಸ್ ಮತ್ತು ಈರುಳ್ಳಿ ಹೂವು (ಸ್ಪ್ರಿಂಗ್ ಆನಿಯನ್) ಬೇಕಾಗುತ್ತದೆ.
ತಯಾರಿಸುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ಚಿಕನ್ ತುಂಡುಗಳನ್ನು ತೆಗೆದುಕೊಂಡು ಅದಕ್ಕೆ ಕಾರ್ನ್‌ಫ್ಲೋರ್, ಮೈದಾ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಮೆಣಸಿನ ಪುಡಿ, ಉಪ್ಪು ಮತ್ತು ಸೋಯಾ ಸಾಸ್ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಮಸಾಲೆ ಚಿಕನ್‌ಗೆ ಸರಿಯಾಗಿ ಅಂಟಿಕೊಳ್ಳಲು ಸ್ವಲ್ಪ ನೀರನ್ನು ಚಿಮುಕಿಸಿ ಮಿಶ್ರಣ ಮಾಡಿ. ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಮಸಾಲೆ ಹಚ್ಚಿದ ಚಿಕನ್ ತುಂಡುಗಳನ್ನು ಹಾಕಿ ಅವು ಹೊಂಬಣ್ಣಕ್ಕೆ ಬಂದು ಗರಿಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಕರಿಯಿರಿ. ನಂತರ ಎಣ್ಣೆಯಿಂದ ತೆಗೆದು ಪಕ್ಕಕ್ಕೆ ಇರಿಸಿ.
ನಂತರ ಮತ್ತೊಂದು ಪ್ಯಾನ್‌ನಲ್ಲಿ ಒಂದು ಚಮಚ ಎಣ್ಣೆ ಹಾಕಿ ಹೆಚ್ಚಿದ ಬೆಳ್ಳುಳ್ಳಿಯನ್ನು ಕೆಂಪಾಗುವವರೆಗೆ ಹುರಿಯಿರಿ. ಇದಕ್ಕೆ ಚಿಲ್ಲಿ ಫ್ಲೇಕ್ಸ್ ಸೇರಿಸಿ, ನಂತರ ಮೊದಲೇ ಕರೆದಿಟ್ಟುಕೊಂಡ ಚಿಕನ್ ತುಂಡುಗಳನ್ನು ಹಾಕಿ ಒಂದು ನಿಮಿಷಗಳ ಕಾಲ ಜೋರು ಉರಿಯಲ್ಲಿ ಚೆನ್ನಾಗಿ ಟಾಸ್ ಮಾಡಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹೂವುಗಳಿಂದ ಅಲಂಕರಿಸಿದರೆ ಬಿಸಿ ಬಿಸಿಯಾದ ಚಿಕನ್ ಕ್ರಿಸ್ಪಿ ಸವಿಯಲು ಸಿದ್ಧ. ಇದನ್ನು ನಿಮ್ಮಿಷ್ಟದ ಸಾಸ್‌ನೊಂದಿಗೆ ಸವಿಯಬಹುದು.

