HomeKarnatakaಹಾಸನಾಂಬ ದೇವಿ ದರ್ಶನಕ್ಕೆ ತೆರೆ: ಕಾಣಿಕೆ ಹುಂಡಿ ಹೊರತಾಗಿ 25.60 ಕೋಟಿ ರೂ. ಸಂಗ್ರಹ

ಹಾಸನಾಂಬ ದೇವಿ ದರ್ಶನಕ್ಕೆ ತೆರೆ: ಕಾಣಿಕೆ ಹುಂಡಿ ಹೊರತಾಗಿ 25.60 ಕೋಟಿ ರೂ. ಸಂಗ್ರಹ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಶ್ರೀ ಹಾಸನಾಂಬ ದೇವಿಗೆ ಇಂದು ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ಗರ್ಭಗುಡಿಯ ಬಾಗಿಲನ್ನು ಮ.1.37 ಕ್ಕೆ ಮುಚ್ಚುವ ಮೂಲಕ ದರ್ಶನಕ್ಕೆ ತೆರೆ ಎಳೆಯಲಾಯಿತು.

ವರ್ಷದಿಂದ ವರ್ಷಕ್ಕೆ ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಬಾರಿ 30 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ದೇವಿ ದರ್ಶನ ಪಡೆದು ಪುನಿತರಾಗಿದ್ದಾರೆ ಎಂದು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡ ಅವರು ತಿಳಿಸಿದ್ದಾರೆ.

ಶ್ರೀ ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ನಾಡ ಹಬ್ಬವಾಗಿ ಆಚರಣೆ ಮಾಡಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದ ಅವರು ಸಾಗರೋಪಾದಿಯಲ್ಲಿ ಹರಿದು ಬಂದಿರುವ ಜನಸಾಗರವನ್ನು ನೋಡಿದರೆ ಮುಂದೆ ಇದು ಹಾಸನ ಜಿಲ್ಲೆಯ ಇತಿಹಾಸಕ್ಕೆ ಆದರ್ಶವಾಗಲಿದೆ. ಈ ಬಾರಿ ದಸರಾ ನೋಡಿಕೊಂಡು ಬಂದ ನಂತರ ಎಂಟು ದಿನಗಳ ಒಳಗೆ ಜಾತ್ರಾ ಮಹೋತ್ಸವವನ್ನು ನಾಡ ಹಬ್ಬದ ರೀತಿಯಲ್ಲಿ ಆಚರಿಸಲಾಯಿತು ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ತಾಯಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ನೋಡಿ ಆನಂದಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡೆ ಮತ್ತು ಎಲ್ಲಾ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿದಾಗ ಜಾತ್ರೆ ನಾಡಹಬ್ಬವಾಗಿ ಪರಿವರ್ತನೆಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಬಾರಿ ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳ, ರಂಗೋಲಿ ಸ್ಪರ್ಧೆ, ಪಾಕ ಸ್ಪರ್ಧೆ, ಜಾನುವಾರು ಗಳ ಪ್ರದರ್ಶನ, ಟಗರು – ಮೇಕೆ ಪ್ರದರ್ಶನ, ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ, ಪುಷ್ಪ ಕಲಾಕೃತಿಗಳ ಪ್ರದರ್ಶನ ಹಾಗೂ ವಾಲಿಬಾಲ್, ಕುಸ್ತಿ, ಕಬ್ಬಡಿ ಕ್ರೀಡಾ ಕೂಟಗಳನ್ನು ಆಯೋಜಿಸಿ ಜನಸ್ನೇಹಿಯಾಗಿ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಂಡು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿ ಜನಮೆಚ್ಚುಗೆಗೆ ಪಾತ್ರವಾಯಿತು ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.

ಹಳ್ಳಿಗಾಡಿನ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ರೈತ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದ ಅವರು ಕಲೆ ಮತ್ತು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಹಾಸನ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸೋಣ ಎಂದು ಹೇಳಿದರು.

ಅ.30 ರಿಂದ ನ.10 ರ ವರೆಗೆ ಭಕ್ತಾದಿಗಳಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲು ಅನುವು ಮಾಡಿಕೊಡುವಂತೆ ಅರ್ಚಕರಲ್ಲಿ ಮನವಿ ಮಾಡಿಕೊಂಡು ಆಗಮಿಸಿದ ಪ್ರತಿಯೊಬ್ಬರಿಗೂ ಸುಗಮ ಮತ್ತು ಸುಲಲಿತವಾಗಿ ದೇವಿ ದರ್ಶನ ಪಡೆಯಲು ಅವಕಾಶ ನೀಡಲಾಯಿತು ಎಂದು ತಿಳಿಸಿದರು.

ಭಕ್ತಾದಿಗಳು ದೇವಿ ದರ್ಶನವನ್ನು ಧರ್ಮ ದರ್ಶನದಲ್ಲಿ, 1000 ಹಾಗೂ 300 ರೂ. ಟಿಕೆಟ್ ಪಡೆದು ದರ್ಶನ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಹುಂಡಿಯನ್ನು ಹೊರತುಪಡಿಸಿ ಈ ಬಾರಿ ಲಾಡು ಪ್ರಸಾದದಿಂದ: 1,29,04,660 ರೂ., 300 ರೂ. ಟಿಕೆಟ್‌ ನಿಂದ: 6,04,22,100 ರೂ., 1000 ರೂ. ಟಿಕೆಟ್ ನಿಂದ: 13,18,36000 ರೂ., ಆನ್‌ ಲೈನ್ ಮೂಲಕ ಟಿಕೆಟ್ ಖರೀದಿ: 5,08,49,274 ರೂ. ಸೇರಿದಂತೆ ಒಟ್ಟು 25,60,12,034 ರೂ. ಹಣ ಸಂಗ್ರಹವಾಗಿದೆ ಎಂದ ಸಚಿವರು ಹುಂಡಿ ತೆರೆದರೆ ಅಂತಿಮವಾಗಿ 30 ಕೋಟಿಗೂ ಹೆಚ್ಚು ಆದಾಯದ ನಿರೀಕ್ಷೆ ಇದೆ ಎಂದು ತಿಳಿಸಿದರು.

ಯಾವುದೇ ಒಂದು ಸಣ್ಣ ಪುಟ್ಟ ಲೋಪಗಳಾಗದಂತೆ ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಿ ಸುಗಮ ಮತ್ತು ಸುರಕ್ಷಿತವಾಗಿ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಸಚಿವರು ಕೃತಜ್ಞತೆ ಸಲ್ಲಿಸಿದರು.

ಜಿಲ್ಲೆಯಲ್ಲಿ ಮುಂಬರುವ ವರ್ಷದ ಅವಧಿಯಲ್ಲಿ ಉತ್ತಮವಾದ ಆಡಳಿತವನ್ನು ನೀಡುತ್ತೇವೆ ಹಾಗೂ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದ ಅವರು ಜಿಲ್ಲೆಯ ನಾಯಕತ್ವವನ್ನು ಎಲ್ಲಾ ಸ್ನೇಹಿತರೊಂದಿಗೆ ಸೇರಿ ಉತ್ತುಂಗಕ್ಕೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಸಂಸದ ಶ್ರೇಯಸ್ ಎಂ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಂಜಿತ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬನವಾಸೆ ರಂಗಸ್ವಾಮಿ, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲ, ಉಪವಿಭಾಗಾಧಿಕಾರಿ ಮತ್ತು ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆಂಚೇಗೌಡ, ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ತಹಶೀಲ್ದಾರ್ ಗೀತಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular