ಇತ್ತೀಚೆಗೆ ‘ದ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಸುನಿಲ್ ಗ್ರೋವರ್ ಅವರು ಅಮೀರ್ ಖಾನ್ ಅವರ ಧ್ವನಿ ಮತ್ತು ಮ್ಯಾನರಿಸಂ ಅನ್ನು ಅದ್ಭುತವಾಗಿ ಮಿಮಿಕ್ರಿ ಮಾಡಿದ್ದರು. ಇದನ್ನು ಮೆಚ್ಚಿದ್ದ ಅಮೀರ್ ಖಾನ್, ಈಗ ತಮ್ಮ ಮುಂಬರುವ ಸಿನಿಮಾ ‘ಹ್ಯಾಪಿ ಪಟೇಲ್’ (Happy Patel) ಪ್ರಚಾರಕ್ಕಾಗಿ ಸುನಿಲ್ ಗ್ರೋವರ್ ಜೊತೆ ಸೇರಿ ಒಂದು ಫನ್ನಿ ವಿಡಿಯೋ ಮಾಡಿದ್ದಾರೆ.
ವಿಡಿಯೋದಲ್ಲೇನಿದೆ? ವಿಡಿಯೋದಲ್ಲಿ ನಟ ವೀರ ದಾಸ್ (Vir Das) ಅವರು ಅಮೀರ್ ಖಾನ್ ಆಫೀಸ್ಗೆ ಪ್ರವೇಶಿಸುತ್ತಾರೆ. ಅಲ್ಲಿ ಸುನಿಲ್ ಗ್ರೋವರ್ ಅವರು ಅಮೀರ್ ಖಾನ್ ಅವರಂತೆ ಬಟ್ಟೆ ಧರಿಸಿ ಅವರ ಸ್ಟೈಲ್ನಲ್ಲೇ ಕುಳಿತಿರುತ್ತಾರೆ. ವೀರ ದಾಸ್ ಮೊದಲು ಗೊಂದಲಕ್ಕೊಳಗಾದರೂ, ಸುನಿಲ್ ಅವರ ಪರ್ಫೆಕ್ಟ್ ಆಕ್ಟಿಂಗ್ ನೋಡಿ ಅವರೇ ಅಸಲಿ ಅಮೀರ್ ಖಾನ್ ಎಂದು ನಂಬುತ್ತಾರೆ.
ಅಷ್ಟರಲ್ಲಿ ನಿಜವಾದ ಅಮೀರ್ ಖಾನ್ ಆಫೀಸ್ ಒಳಗೆ ಬರುತ್ತಾರೆ. ಸುನಿಲ್ ಅವರನ್ನು ನೋಡಿ “ಯಾರಿದು?” ಎಂದು ಸಿಟ್ಟಿನಿಂದ ಪ್ರಶ್ನಿಸುತ್ತಾರೆ. ಆದರೆ ವೀರ ದಾಸ್ ಮತ್ತು ಅಲ್ಲಿನ ಸೆಕ್ಯೂರಿಟಿ ಗಾರ್ಡ್ಗಳು ಸುನಿಲ್ ಅವರನ್ನೇ ಅಸಲಿ ಅಮೀರ್ ಎಂದು ಭಾವಿಸಿ, ನಿಜವಾದ ಅಮೀರ್ ಖಾನ್ ಅವರನ್ನೇ “ನೀವು ಸುನಿಲ್ ಗ್ರೋವರ್ ಅಲ್ವಾ?” ಎಂದು ಕೇಳಿ ಆಫೀಸ್ನಿಂದ ಹೊರಕ್ಕೆ ಎಳೆದುಕೊಂಡು ಹೋಗುತ್ತಾರೆ!
ಅಮೀರ್ ಖಾನ್ ಪ್ರತಿಕ್ರಿಯೆ: ಸುನಿಲ್ ಗ್ರೋವರ್ ಅವರ ಮಿಮಿಕ್ರಿಯನ್ನು ಅಮೀರ್ ಖಾನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಇದು ಕೇವಲ ಮಿಮಿಕ್ರಿ ಅಲ್ಲ, ಅಷ್ಟು ನೈಜವಾಗಿತ್ತು. ನನ್ನನ್ನು ನಾನೇ ಕನ್ನಡಿಯಲ್ಲಿ ನೋಡಿಕೊಂಡಂತೆ ಭಾಸವಾಯಿತು. ಆ ವಿಡಿಯೋ ನೋಡಿ ನಾನು ನಕ್ಕು ನಕ್ಕು ಸುಸ್ತಾದೆ” ಎಂದು ಅಮೀರ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಹ್ಯಾಪಿ ಪಟೇಲ್ ಸಿನಿಮಾ: ಈ ವಿಡಿಯೋ ಅಮೀರ್ ಖಾನ್ ನಿರ್ಮಾಣದ ‘ಹ್ಯಾಪಿ ಪಟೇಲ್’ ಚಿತ್ರದ ಪ್ರಚಾರದ ಭಾಗವಾಗಿದೆ. ಈ ಚಿತ್ರದ ಮೂಲಕ ವೀರ ದಾಸ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ ಮತ್ತು ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದಾರೆ.

