ರಾಮನಗರ: ಕೆರೆಯಲ್ಲಿ ಈಜಲು ತೆರಳಿದ್ದ ಕಾಅಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಕನಕಪುರ ತಾಲೂಕಿನಲ್ಲಿ ನಡೆದಿದೆ.
ಕನಕಪುರದ ಕಬ್ಬಾಳು ಕೆರೆಯಲ್ಲಿ ಈ ದುರಂತ ಸಂಭವಿಸಿದೆ. ತನುಷ್ (18) ಹಾಗೂ ಸಂತೋಷ್ (19) ಮೃತ ವಿದ್ಯಾರ್ಥಿಗಳು. ಬೆಂಗಳೂರಿನ ಬನಶಂಕರಿ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಸುಮಾರು 11 ವಿದ್ಯಾರ್ಥಿಗಳು ಕಬ್ಬಾಳು ದೇವಸ್ಥಾನಕ್ಕೆ ಬಂದಿದ್ದರು. ಬಳಿಕ ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಹೋದ ಇನ್ನೋರ್ವ ವಿದ್ಯಾರ್ಥಿ ಕೂಡ ನೀರಿನಲ್ಲಿ ಮುಳುಗಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಸಾತನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

