ರಾಜ್‌ಕೋಟ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ಮೈದಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಳ್ಳಲು ಭದ್ರತಾ ಕೋಟೆಯನ್ನು ಭೇದಿಸಿ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬನಿಗೆ ಪಂದ್ಯದ ಅಧಿಕಾರಿಗಳು ಕಪಾಳಮೋಕ್ಷ ಮಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೊಹ್ಲಿ ಮನವಿಗೆ ಬೆಲೆ ನೀಡದ ಅಧಿಕಾರಿಗಳು ನಿರಂಜನ್ ಶಾ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದಾಗ, ಕೊಹ್ಲಿ ಅವರ ಕಟ್ಟಾ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಮೈದಾನದೊಳಗೆ ಓಡಿ ಬಂದಿದ್ದ. ತಕ್ಷಣವೇ ಕೊಹ್ಲಿ ಅವರನ್ನು ಅಪ್ಪಿಕೊಂಡ ಆತನನ್ನು ಕಂಡು ವಿರಾಟ್ ಆರಂಭದಲ್ಲಿ ತುಸು ಗಾಬರಿಯಾದರೂ, ನಂತರ ಪರಿಸ್ಥಿತಿಯನ್ನು ನಿಭಾಯಿಸಿದರು. ಭದ್ರತಾ ಅಧಿಕಾರಿಗಳು ಆತನನ್ನು ಎಳೆದಾಡಲು ಬಂದಾಗ, “ಆತನನ್ನು ಸಂಭಾಳಿಸಿ, ಅತಿರೇಕದ ವರ್ತನೆ ತೋರಬೇಡಿ” ಎಂದು ಕೊಹ್ಲಿ ಮನವಿ ಮಾಡಿಕೊಂಡಿದ್ದರು.
ಆದರೆ ಕೊಹ್ಲಿಯ ಮಾತು ಅಧಿಕಾರಿಗಳ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಮೈದಾನದಿಂದ ಆತನನ್ನು ಹೊರಕ್ಕೆ ಕರೆದೊಯ್ಯುತ್ತಿದ್ದಂತೆಯೇ, ಅಧಿಕಾರಿಯೊಬ್ಬರು ಆ ಅಭಿಮಾನಿಯ ಕೆನ್ನೆಗೆ ಬಾರಿಸಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಭಿಮಾನಿಯ ಮೇಲಿನ ಈ ಹಲ್ಲೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸೋಲು ಮೈದಾನದಲ್ಲಿ ನಡೆದ ಈ ಹೈಡ್ರಾಮಾ ಒಂದೆಡೆಯಾದರೆ, ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಸೋಲನ್ನು ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 284 ರನ್ ಗಳಿಸಿತ್ತು. ಕೆ.ಎಲ್. ರಾಹುಲ್ ಆಕರ್ಷಕ ಶತಕ (100) ಸಿಡಿಸಿದರೆ, ನಾಯಕ ಶುಭಮನ್ ಗಿಲ್ ಅರ್ಧಶತಕದ ಕಾಣಿಕೆ ನೀಡಿದರು. ವಿರಾಟ್ ಕೊಹ್ಲಿ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಭಾರತ ನೀಡಿದ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಡ್ಯಾರಿಲ್ ಮಿಚೆಲ್ ಆಸರೆಯಾದರು. ಅಜೇಯ 131 ರನ್ ಸಿಡಿಸಿದ ಮಿಚೆಲ್ ಮತ್ತು 87 ರನ್ ಗಳಿಸಿದ ವಿಲ್ ಯಂಗ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಕಿವಿ ಪಡೆಯು ಸುಲಭವಾಗಿ ಗುರಿ ತಲುಪಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದ ಸಮಬಲ ಸಾಧಿಸಿವೆ. ಸರಣಿಯ ನಿರ್ಣಾಯಕ ಮೂರನೇ ಪಂದ್ಯ ಭಾನುವಾರ ಇಂದೋರ್‌ನಲ್ಲಿ ನಡೆಯಲಿದೆ.

