HomeKarnatakaಮಕ್ಕಳ ಹಕ್ಕುಗಳ ರಕ್ಷಣೆಗೆ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ : ಪ್ರತಿ ವಾರ್ಡ್‌'ನಲ್ಲಿ 'ಮಕ್ಕಳ ಸ್ಥಿತಿಗತಿ...

ಮಕ್ಕಳ ಹಕ್ಕುಗಳ ರಕ್ಷಣೆಗೆ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ : ಪ್ರತಿ ವಾರ್ಡ್‌’ನಲ್ಲಿ ‘ಮಕ್ಕಳ ಸ್ಥಿತಿಗತಿ ವರದಿ’ ಕಡ್ಡಾಯ.!

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಕ್ಕಳ ಹಕ್ಕುಗಳು ಮತ್ತು ರಕ್ಷಣಾ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪೌರಾಡಳಿತ ನಿರ್ದೇಶನಾಲಯ ಹೊಸ ಸುತ್ತೋಲೆ ಹೊರಡಿಸಿದೆ. ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯಂತೆ (UNCRC) ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಈ ಕ್ರಮ ಕೈಗೊಳ್ಳಲಾಗಿದೆ.

 United Nations Convention on the Rights of the Child (UNCRC) ಒಡಂಬಡಿಕೆಯಂತೆ ಮಕ್ಕಳಿಗೆ ಬದುಕುವ ಹಕ್ಕು, ರಕ್ಷಣೆ ಹಕ್ಕು, ಅಭಿವೃದ್ಧಿ ಹಕ್ಕು ಹಾಗೂ ಭಾಗವಹಿಸುವ ಹಕ್ಕುಗಳು ಅಂತರರಾಷ್ಟ್ರೀಯವಾಗಿ ಮಾನ್ಯಗೊಂಡಿವೆ. ಭಾರತವು ಈ ಒಡಂಬಡಿಕೆಗೆ ಸಹಿ ಹಾಕಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಬದ್ಧತೆಯನ್ನು ವ್ಯಕ್ತಪಡಿಸಿದೆ. ಹಾಗೆಯೇ, Sustainable Development Goals (SDG) ಗುರಿಗಳಲ್ಲಿ ಮಕ್ಕಳ ಆರೋಗ್ಯ ಶಿಕ್ಷಣ, ಲಿಂಗ ಸಮಾನತೆ, ಸುರಕ್ಷತೆ ಮತ್ತು ಕಲ್ಯಾಣಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.

ಈ ಗುರಿಗಳನ್ನು ಪರಿಣಾಮಕಾರಿಯಾಗಿ ಸಾಧಿಸಲು ಸ್ಥಳೀಯಾಡಳಿತ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಸ್ಥಳೀಯ ಮಟ್ಟದಲ್ಲಿ ಮಕ್ಕಳ ಸಮಸ್ಯೆಗಳನ್ನು ಗುರುತಿಸುವುದು, ಅವುಗಳಿಗೆ ತ್ವರಿತ ಸ್ಪಂದನೆ ನೀಡುವುದು ಹಾಗೂ ಮಕ್ಕಳಿಗೆ ಸ್ನೇಹಪರ ಆಡಳಿತ ವ್ಯವಸ್ಥೆ ರೂಪಿಸುವುದು ಪೌರಾಡಳಿತ ಸಂಸ್ಥೆಯ ಮುಖ್ಯ ಜವಾಬ್ದಾರಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಪೌರಾಡಳಿತ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು (ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್) ಕೆಳಕಂಡ ಕ್ರಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ನಿರ್ದೇಶನ ನೀಡಲಾಗಿದೆ:

ಅನುಷ್ಠಾನಗೊಳಿಸಬೇಕಾದ ಕ್ರಮಗಳು:

1. ವಾರ್ಡ್ ಮಟ್ಟದ ಮಕ್ಕಳ ಅಂಕಿ ಅಂಶ ಸಂಗ್ರಹಣೆ:

ಪ್ರತಿ ವಾರ್ಡಿನ ವ್ಯಾಪ್ತಿಯಲ್ಲಿ 0-18 ವರ್ಷ ವಯಸ್ಸಿನ ಮಕ್ಕಳ ಸಂಖ್ಯೆ, ಶಾಲಾ ಹಾಜರಾತಿ, ಶಾಲೆಯಿಂದ ಹೊರಗುಳಿದ ಮಕ್ಕಳು, ಬಾಲಕಾರ್ಮಿಕತೆ, ವಿಶೇಷ ಅವಶ್ಯಕತೆಗಳಿರುವ ಮಕ್ಕಳು. ಸಂಕಷ್ಟದಲ್ಲಿನ ಮಕ್ಕಳು ಮುಂತಾದ ಮಾಹಿತಿಗಳನ್ನು ಸಂಗ್ರಹಿಸಿ “ವಾರ್ಡ್ ಮಟ್ಟದ ಮಕ್ಕಳ ಸ್ಥಿತಿಗತಿ ವರದಿ” (Ward Child Status Report) ತಯಾರಿಸಬೇಕು.

2. ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ರಚನೆ:

ಪ್ರತಿ ಸ್ಥಳೀಯಾಡಳಿತದಲ್ಲಿ ಅಧ್ಯಕ್ಷರು/ಮೇಯರ್ ಅವರ ಅಧ್ಯಕ್ಷತೆಯಲ್ಲಿ “ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ” ರಚಿಸಬೇಕು. ಸಮಿತಿಯಲ್ಲಿ ಆಯ್ಕೆಯಾದ ಸದಸ್ಯರು, ಸಂಬಂಧಿತ ಅಧಿಕಾರಿಗಳು, ಸಮಾಜ ಸೇವಕರು ಹಾಗೂ ಮಕ್ಕಳ ಪ್ರತಿನಿಧಿಗಳು ಸೇರಿರಬೇಕು. (ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿರುವ

ಸುತ್ತೋಲೆಯನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಕೆಳಗಿನ ವಿಷಯಗಳ ಕುರಿತು ಚರ್ಚಿಸಿ ಮೊದಲ 5 ಅಂಶಗಳನ್ನು ಶೇ 100ರಷ್ಟು ಸಾಧಿಸುವುದು ಹಾಗೂ 6 ರಿಂದ 16 ರವರೆಗಿನ ಅಂಶಗಳನ್ನು ಶೂನ್ಯಕ್ಕಿಳಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

1. ಎಲ್ಲಾ ಮಕ್ಕಳ 100% ಜನನ ಪ್ರಮಾಣಪತ್ರ ನೋಂದಣಿ ಮತ್ತು 100% ವಿತರಣೆ ಮಾಡವುದು.

2. ಶೇ 100% ರೋಗನಿರೋಧಕ ಚುಚ್ಚುಮದ್ದು ಖಾತರಿಪಡಿಸಿಕೊಳ್ಳುವುದು. (0-16 ವರ್ಷ)

3. ಅಂಗನವಾಡಿಯಲ್ಲಿ 100% ಹಾಜರಾತಿ ಖಾತರಿಪಡಿಸಿಕೊಳ್ಳುವುದು. (3-6 ವರ್ಷ)

4. 1 ರಿಂದ 10ನೇ ತರಗತಿ(+2(ಪಿಯುಸಿ)ಯಲ್ಲಿ 100% ಹಾಜರಾತಿ ಖಾತರಿಪಡಿಸಿಕೊಳ್ಳುವುದು.

5. 5. ಶೇ 100% ಹೆಣ್ಣು ಮಕ್ಕಳ ಶಿಕ್ಷಣವನ್ನು ಖಾತರಿಪಡಿಸಿಕೊಳ್ಳುವುದು.

6. ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯನ್ನು ಶೂನ್ಯಗೊಳಿಸುವುದು.

7. ಬಾಲ್ಯವಿವಾಹಗಳನ್ನು ಶೂನ್ಯಗೊಳಿಸುವುದು.

8. ಮಕ್ಕಳ ಮತ್ತು ಹದಿಹರೆಯದವರಿಗೆ ದುಡಿಮೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುವುದು.

9. ಮಕ್ಕಳ ಕಳ್ಳ ಸಾಗಣೆ ತಡೆಯುವುದು.

10. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಯುವುದು.

11. ಬೀದಿಬದಿಯ ಮತ್ತು ಭಿಕ್ಷಾಟನೆಯನ್ನು ತಡೆಯುವುದು.

12. ಮಕ್ಕಳ ಅಪಘಾತಗಳು ಮತ್ತು ಅಸಜ ಸಾವುಗಳನ್ನು ತಡೆಯುವುದು.

13. ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ತೊಡೆದುಹಾಕುವುದು.

14. ಮಕ್ಕಳ ಕಾಣೆಯಾಗುವ ಪ್ರಕರಣಗಳನ್ನು ತಡೆಯುವುದು.

15. ತಮ್ಮ ವ್ಯಾಪ್ತಿಯಲ್ಲಿ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳು, ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳ ಸಂಖ್ಯೆಯನ್ನು ಕಾಲಮಿತಿಯೊಳಗೆ ಶೂನ್ಯಗೊಳಿಸುವುದು.

16. ಮಾದಕ ವ್ಯಸನ ಹಾಗೂ ಆನ್‌ಲೈನ್ ಲೈಂಗಿಕ ಹಿಂಸೆ ಮತ್ತು ಶೋಷಣೆಯಿಂದ ಮಕ್ಕಳ ರಕ್ಷಣೆಮಾಡುವುದು.

3. ವಾರ್ಡ್ ಮಟ್ಟದ ಮಕ್ಕಳ ಹಕ್ಕುಗಳ ಸಭೆ:

ಮಕ್ಕಳ ಭಾಗವಹಿಸುವ ಹಕ್ಕಿನ ನೆಲೆಯಲ್ಲಿ ಪ್ರತೀ ವರ್ಷ ನವೆಂಬರ್ ತಿಂಗಳಲ್ಲಿ (ಮಕ್ಕಳ ಹಕ್ಕುಗಳ ಮಾಸದ ಅಂಗವಾಗಿ) ಪ್ರತಿ ವಾರ್ಡನಲ್ಲಿ “ಮಕ್ಕಳ ಹಕ್ಕುಗಳ ಸಭೆ” ಆಯೋಜಿಸಬೇಕು. ಸಭೆಯಲ್ಲಿ ಮಕ್ಕಳು ತಮ್ಮ ಸಮಸ್ಯೆಗಳು, ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಕಲ್ಪಿಸಬೇಕು.

4. ಸಾಮಾನ್ಯ ಸಭೆಯಲ್ಲಿ ಚರ್ಚೆ ಮತ್ತು ಕ್ರಿಯಾ ಯೋಜನೆ:

ವಾರ್ಡ್ ಮಟ್ಟದ ಮಕ್ಕಳ ಸ್ಥಿತಿಗತಿ ವರದಿ ಹಾಗೂ ಮಕ್ಕಳ ಹಕ್ಕುಗಳ ಸಭೆಯಲ್ಲಿ ಬಂದ ವಿಷಯಗಳನ್ನು ಸಂಬಂಧಿತ ಸ್ಥಳೀಯ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಡ್ಡಾಯವಾಗಿ ಚರ್ಚಿಸಿ, ತೀರ್ಮಾನ ಕೈಗೊಂಡು ವಾರ್ಷಿಕ ಕ್ರಿಯಾಯೋಜನೆಯಲ್ಲಿ ಸೇರಿಸಬೇಕು.

5. ಮಕ್ಕಳ ಅಹವಾಲುಗಳಿಗೆ ಸ್ಪಂದನೆ:

ಮಕ್ಕಳಿಂದ ಬಂದ ಅಹವಾಲುಗಳಿಗೆ ಸಮಯಬದ್ಧವಾಗಿ ಸ್ಪಂದಿಸಲು ವಿಶೇಷ ನೋಂದಣಿ ಪುಸ್ತಕ/ಡಿಜಿಟಲ್ ಪೋರ್ಟಲ್ ವ್ಯವಸ್ಥೆ ರೂಪಿಸಬೇಕು. ಕೈಗೊಂಡ ಕ್ರಮಗಳ ಪ್ರಗತಿ ವರದಿಯನ್ನು ತ್ರೈಮಾಸಿಕವಾಗಿ ದಾಖಲಿಸಬೇಕು.

ಅನುಷ್ಠಾನ ಮತ್ತು ಮೇಲ್ವಿಚಾರಣೆ

1. ಮೇಲ್ಕಂಡ ಕ್ರಮಗಳ ಅನುಷ್ಠಾನ ಕುರಿತು ತ್ರೈಮಾಸಿಕ ವರದಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸುವುದು..

2. ಜಿಲ್ಲಾಮಟ್ಟದ ಅಧಿಕಾರಿಗಳು, ಪ್ರಗತಿಯನ್ನು ಪರಿಶೀಲಿಸಿ ಸಮನ್ವಯ ಸಭೆಗಳಲ್ಲಿ ವಿಮರ್ಶೆ ನಡೆಸುವುದು.

3. ಅನುಷ್ಠಾನದಲ್ಲಿ ವಿಫಲವಾದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು

ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪ್ರೋತ್ಸಾಹವು ಸಮಗ್ರ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಗತ್ಯವಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಮಕ್ಕಳ ಸ್ನೇಹಪರ ಆಡಳಿತ ವ್ಯವಸ್ಥೆಯನ್ನು ರೂಪಿಸಿ, ಮಕ್ಕಳ ಕಲ್ಯಾಣವನ್ನು ಆಡಳಿತದ ಮುಖ್ಯ ಅಜೆಂಡವಾಗಿ ಪರಿಗಣಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಸುತ್ತೋಲೆಯನ್ನು ತಕ್ಷಣದಿಂದಲೇ ಜಾರಿಗೆ ತರಲು ಸೂಚಿಸಿದೆ.ಈ ಮೇಲಿನದು ತಾತ್ಕಾಲಿಕ ಕಾರ್ಯಸೂಚಿಯಾಗಿದ್ದು, ವಿವರವಾದ ಕಾರ್ಯಕ್ರಮಗಳನ್ನು ಸಂಬಂಧಿತ ವಿವಿಧ ಸಂಸ್ಥೆಗಳು, ಇಲಾಖೆಗಳೊಡನೆ ಸಮಾಲೋಚನೆ ನಡೆಸಿ ಹೊರಡಿಸಲಾಗುತ್ತದೆ ಎಂದು ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular