ಕರ್ನಾಟಕದ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ. ರಾಜ್ಯ ಸರ್ಕಾರ ಅವರ ಬೇಡಿಕೆಗಳನ್ನು ಪರಿಶೀಲನೆ ಮಾಡುವುದಾಗಿ ಭರವಸೆ ಕೊಟ್ಟಿದೆ. ಈಗ ಮಾಹಿತಿ ಹಕ್ಕು ಕಾರ್ಯಕರ್ತ ಎನ್.ಶ್ರೀನಿವಾಸ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಸಾರಿಗೆ ನೌಕರರು ಭಿಕ್ಷುಕರಲ್ಲ, ಶ್ರಮಜೀವಿಗಳು, ಬೆವರು ಸುರಿಸಿ ದುಡಿಯುವವರು. ನಮ್ಮ ಶ್ರಮಕ್ಕೆ/ ಬೆವರಿಗೆ ತಕ್ಕ ವೇತನ ಹಾಗೂ ವೇತನ ಪರಿಷ್ಕರಣೆ ಬಾಕಿ ನೀಡಲೇಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯದ ಕೋಟ್ಯಾಂತರ ನಾಗರಿಕರಿಗೆ, ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ವಿಶೇಷಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಸಂಪರ್ಕ ಸೇತುವೆಯಾಗಿ ಏಷ್ಯಾ ಖಂಡ ಹಾಗೂ ರಾಷ್ಟ್ರ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿ ಅತ್ಯುತ್ತಮ ಸಾರಿಗೆ ಸೇವೆ ಸಲ್ಲಿಸುತ್ತಿರುವ ಸಮಸ್ತ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಪರವಾಗಿ ಸಲ್ಲಿಸುತ್ತಿರುವ ಮನವಿ ಎಂದು ಹೇಳಿದ್ದಾರೆ.
ತಾವು ಸಾರಿಗೆ ನೌಕರರಿಗೆ 26 ತಿಂಗಳ ವೇತನ ಪರಿಷ್ಕರಣೆಯ ಬಾಕಿ ಹಾಗೂ 1-4- 2025ರಿಂದ ವೇತನ ಪರಿಷ್ಕರಣೆ ಮಾಡುವುದಾಗಿ ನೌಕರರ ಕಾರ್ಮಿಕರ ಮುಖಂಡರುಗಳಿಗೆ ತಿಳಿಸಿರುವುದು ಸರಿಯಷ್ಟೆ. ಸಾರಿಗೆ ನೌಕರರು ಭಿಕ್ಷುಕರಲ್ಲ, ಶ್ರಮಜೀವಿಗಳು ಬೆವರು ಸುರಿಸಿ ದುಡಿಯುವವರು. ಸಾರಿಗೆ ನೌಕರರು ತಮ್ಮ ದುಡಿಮೆಯ ಬೆವರಿನ ಪ್ರತಿಫಲವನ್ನು/ ವೇತನವನ್ನು ಕೇಳುತ್ತಿದ್ದೇವೆಯೇ ಹೊರತು ಭಿಕ್ಷೆಯಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ತಾವು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ಸಂವಿಧಾನಕ್ಕೆ ಬದ್ಧ ಮುಖ್ಯಯಂತ್ರಿಯವರು. ಸಮಾನತೆ, ಕಾರ್ಮಿಕರ ಹಿತಕಾಯುವ ಮುಖ್ಯಮಂತ್ರಿ ಎಂದು ತಿಳಿದಿದ್ದೆವು. ಆದರೆ ತಮ್ಮ ಅವಧಿಯಲ್ಲಿ ಸಾರಿಗೆ ನೌಕರರಿಗೆ ಅನ್ಯಾಯವಾಗುತ್ತಿರುವುದು ಊಹಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.
ಕಛೇರಿಯಲ್ಲಿ ಕುಳಿತು 6-7 ಗಂಟೆ ಕೆಲಸ ಮಾಡುವ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿರುವಿರಿ. ಬೆಂಗಳೂರು ವಿದ್ಯುತ್ ಸರಬರಾಜು ಮಂಡಳಿಯ ನೌಕರರಿಗೆ ಯಾವುದೇ ಮುಷ್ಕರ ಮಾಡದಿದ್ದರೂ ಸಹ ಬರಪೂರ ವೇತನ ಹೆಚ್ಚಿಸಲಾಗಿದೆ. ಇದು ಸಂವಿಧಾನದ ಉಲ್ಲಂಘನೆಯಲ್ಲವೇ?
ತಾವು ಚುನಾವಣೆಗೆ ಮುಂಚೆ ಸಾರಿಗೆ ನೌಕರರ ಪರವಾಗಿ ಬ್ಯಾಟಿಂಗ್ ಮಾಡಿ ಚುನಾವಣಾ ಭಾಷಣದಲ್ಲಿ ಯಡಿಯೂರಪ್ಪರವರನ್ನು ಛೇಡಿಸಿ ಸಾರಿಗೆ ನೌಕರರ ಕುಟುಂಬಗಳ ಮತಗಳು ತಮ್ಮ ಪಕ್ಷಕ್ಕೆ ಬೀಳುವಂತೆ ಮಾಡಿದಿರಿ. ತಮ್ಮ ಪಕ್ಷಕ್ಕೆ ಅಭೂತಪೂರ್ವ ಜಯ ದೊರೆಯಿತು. ಆದರೆ, ಅಧಿಕಾರ ಸಿಕ್ಕ ತಕ್ಷಣ ತಾವು ಸಾರಿಗೆ ನೌಕರರನ್ನೇ ಮರೆತಿರುವಿರಿ. ತಾವು ಚುನಾವಣಾ ಭಾಷಣದಲ್ಲಿ ಆಡಿತ ಮಾತುಗಳು ತಮಗೆ ಮರೆತು ಹೋಯಿತೆ?.
ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂದು ಹೇಳುತ್ತಾ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸದೆ ಮೀನಾಮೇಶ ಎಣಿಸುತ್ತಾ ಬರುತ್ತಿರುವಿರಿ. ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸಲು ಸಾರಿಗೆ ನೌಕರರು ಕಾರಣರೇ?. ಒಂದು ವೇಳೆ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸುತ್ತಿದ್ದರೆ ಅದಕ್ಕೆ ಈವರೆಗೆ ಕರ್ನಾಟಕ ರಾಜ್ಯವನ್ನಾಳಿದ ಸರ್ಕಾರಗಳು ಕಾರಣರಾಗಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಬಸ್ ದರ ಏರಿಸದೇ, ಕಳಪೆ ಬಸ್ಸುಗಳ ಖರೀದಿ, ಕಳಪೆ ಇಟಿಎಂ ಯಂತ್ರಗಳ ಖರೀದಿ, ಕಳಪೆ ಬಿಡಿಭಾಗಗಳ ಖರೀದಿ, ಕಳಪೆ ಕಾಮಗಾರಿಗಳಿಂದ ಸಂಸ್ಥೆಗಳು ನಷ್ಟ ಅನುಭವಿಸಿವೆಯೇ ಹೊರತು ಯಾವುದೇ ಕಾರಣಕ್ಕೂ ಸಂಸ್ಥೆಯ ದುಡಿಯುವ ನೌಕರರಿಂದ ಸಂಸ್ಥೆಗಳು ನಷ್ಟ ಅನುಭವಿಸಿಲ್ಲ. ಸಂಸ್ಥೆಯ ನೌಕರರನ್ನು ವಜಾ ಗೊಳಿಸಿದ್ದರಿಂದ, ಅಮಾನತ್ತು ಮಾಡಿದ್ದರಿಂದ ಹಾಗೂ ವರ್ಗಾವಣೆ ಮಾಡಿದ್ದರಿಂದ ಸಂಸ್ಥೆ ನೂರಾರು ಕೋಟಿ ಲಾಭ ಗಳಿಸಿದೆ.
ಇದಕ್ಕೆ ಉದಾಹರಣೆಯಾಗಿ ವಿಶ್ವವಿಖ್ಯಾತ ಆರ್ಥಿಕ ತಜ್ಞರೂ, ದೇಶದ ದಕ್ಷ ಪ್ರಾಮಾಣಿಕ ಪ್ರಧಾನಿಯವರೂ ಆದ ಸನ್ಮಾನ್ಯ ಶ್ರೀ ಮನಮೋಹನ್ ಸಿಂಗ್ ಅವಧಿಯಲ್ಲಿ ಸಾರ್ವಜನಿಕ ಸಾರಿಗೆಯು ಬಡವರಿಗೂ ಕೈಗೆಟುಕುವ ದರದಲ್ಲಿ ದೊರೆಯಲಿ, ಸೌಲಭ್ಯಗಳು ಸಿಗಲಿ ಎಂಬ ಧೈಯೋದ್ದೇಶದಿಂದ ದೇಶದ ಎಲ್ಲಾ ರಾಜ್ಯಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದರು.
ಆ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ರಾಜ್ಯಾದ್ಯಂತ ನೂರಾರು ಬಸ್ ನಿಲ್ದಾಣಗಳನ್ನು ನಿರ್ಮಿಸಿ, ಅವಶ್ಯಕತೆ ಇಲ್ಲದಿದ್ದರೂ ಸಹ ಬಸ್ ನಿಲ್ದಾಣಗಳನ್ನು ನಿರ್ಮಿಸಿ ಕಳಪೆ ವಾಹನಗಳ ಖರೀದಿ, ಕಳಪೆ ಕಾಮಗಾರಿಗಳಿಂದ ಸಾರಿಗೆ ನಿಗಮಗಳು ನಷ್ಟ ಹೊಂದಲು ಕಾರಣವಾಯಿತು.
ಉದಾ:- ಬೆಂಗಳೂರು ನಗರದ ಜಾಲಹಳ್ಳಿ ಕ್ರಾಸ್ ಸಮೀಪ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಬಸವೇಶ್ವರ ಬಸ್ ನಿಲ್ದಾಣ ನಿರುಪಯುಕ್ತವಾಗಿದೆ. ಇದಕ್ಕೆ ಯಾರು ಹೊಣೆ?, ಸಾರಿಗೆ ನೌಕರರೇ?
ನಾಲ್ಕೂ ಸಾರಿಗೆ ಸಂಸ್ಥೆಗಳು ರಾಜ್ಯಾದ್ಯಾಂತ ಸಾವಿರಾರು ಎಕರೆ ಜಮೀನು, ಕೇಂದ್ರ ಕಛೇರಿ ಕಟ್ಟಡಗಳು, ಪ್ರಾದೇಶಿಕ ಕಾರ್ಯಾಗಾರಗಳು, ವಿಭಾಗೀಯ ಕಚೇರಿಗಳು, ಘಟಕ ಕಛೇರಿಗಳು, ತರಬೇತಿ ಕೇಂದ್ರಗಳು, ಬಸ್ ನಿಲ್ದಾಣಗಳನ್ನು ಹೊಂದಿದೆ ಇವೆಲ್ಲವೂ ಸಾಧ್ಯವಾದದ್ದು ನಮ್ಮಗಳ ಪ್ರಾಮಾಣಿಕ ದುಡಿಮೆಯಿಂದ ಹಾಗೂ ರಾಜ್ಯದ ಕೆಲ ಜಮೀನುದಾರರು ಉಚಿತವಾಗಿ ನೀಡಿದುದರಿಂದ.
ಮಾನ್ಯ ಮುಖ್ಯಮಂತ್ರಿಯವರೇ ನಾನು ತಮಗೊಂದು ಆಹ್ವಾನವನ್ನು ನೀಡುತ್ತಿದ್ದೇನೆ. ರಾಜ್ಯ ಸರ್ಕಾರದ 224 ಶಾಸಕರು, ವಿಧಾನ ಪರಿಷತ್ ಸದಸ್ಯರು, ಐಎಎಸ್, ಐಪಿಎಸ್, ಐಎಫ್ಎಸ್, ಐಇಎಸ್, ಇತ್ಯಾದಿ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರು 24 ಗಂಟೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಚಾಲಕರಾಗಿ, ನಿರ್ವಾಹಕರಾಗಿ, ತಾಂತ್ರಿಕ ಸಿಬ್ಬಂದಿಯವರಾಗಿ, ನಿರ್ವಹಣೆಗಾರರಾಗಿ ಕೆಲಸ ಮಾಡಿ ರಾಜ್ಯದ ಜನತೆಯಿಂದ ಮೆಚ್ಚುಗೆ ಪಡೆಯಿರಿ.
ಸಾರಿಗೆ ಸಂಸ್ಥೆಗಳು ಪ್ರಾರಂಭವಾದ ದಿನದಿಂದ ದಿನಾಂಕ 31-12-2025ರ ವರೆಗಿನ ಆದಾಯ, ಖರ್ಚು, ಲಾಭ ನಷ್ಟದ ಬಗ್ಗೆ ಶ್ವೇತ ಪತ್ರ ಹೊರಡಿಸಿ ರಾಜ್ಯದ ಜನತೆಯ ಮುಂದಿಡಿ. ಇಲ್ಲವೆ ತಮ್ಮ ಸರ್ಕಾರದ ಖಜಾನೆ ದಿವಾಳಿಯಾಗಿದೆ ಎಂದು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ಸಂವಿಧಾನದ ಪ್ರತಿಯ ಮೇಲೆ ವಿಧಾನಸೌಧದ ಮುಂದೆ ರಾಜ್ಯಪಾಲರು ಹಾಗೂ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಮಾಣ ಮಾಡಿ.
ಆ ರೀತಿ ಪ್ರಮಾಣ ಮಾಡಿದ್ದಲ್ಲಿ ಸಮಸ್ತ ಸಾರಿಗೆ ಸಂಸ್ಥೆಯ ನೌಕರ ಮನವೊಲಿಸಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದರೂ, ಸರ್ಕಾರದ ಖಜಾನೆ ದಿವಾಳಿಯಾಗಿದ್ದರೂ ಸಹ ಸಂದಿಗ್ಧ ಪರಿಸ್ಥಿತಿಯಲ್ಲೂ ಪ್ರತಿ ತಿಂಗಳು ವೇತನ ಪಾವತಿಸುತ್ತಿರುವ ಮಾನ್ಯ ಮುಖ್ಯಮಂತ್ರಿಯವರಾದ ತಮ್ಮ ಅಧಿಕಾರದ ಅವಧಿಯವರೆಗೆ ಯಾವುದೇ ಹೆಚ್ಚಿನ ವೇತನಕ್ಕೆ ಆಪೇಕ್ಷಿಸದೇ ಪ್ರಸ್ತುತ ನೀಡುತ್ತಿರುವ ವೇತನವನ್ನೇ ಪಡೆದು ತಮಗೆ ಕೈಜೋಡಿಸುತ್ತೇವೆ.
ಬಿಸಿಲು, ಮಳೆ ಚಳಿಯೆನ್ನದೆ ದಿನದ 24 ಗಂಟೆಯೂ ನಿರಂತರವಾಗಿ ಪ್ರತಿನಿತ್ಯ ಪ್ರತಿ ಕೋಟ್ಯಾಂತರ ನಾಡಿನ ಜನತೆಗೆ ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಸಾರಿಗೆ ನೌಕರರನ್ನು ಗೌರವಿಸಿ.
ಸಾರಿಗೆ ನೌಕರರಿಗೆ ನ್ಯಾಯಯುತವಾಗಿ ಬರಬೇಕಾದ 38 ತಿಂಗಳ ವೇತನ ಬಾಕಿ, 1-1- 2024 ರಿಂದ ವೇತನ ಪರಿಷ್ಕರಣೆ ಹಾಗೂ ವೇತನ ಪರಿಷ್ಕರಣೆಯ 27 ತಿಂಗಳ ಬಾಕಿ ಹಾಗೂ 2017ರಿಂದ ಈವರೆಗೆ ಗಳಿಕೆ ರಜೆ ನಗದೀಕರಣ ನೀಡದೆ ಉಳಿಸಿಕೊಂಡಿರುವ ಗಳಿಕೆ ರಜೆ ನಗದೀಕರಣದ ಮೊಬಲಗನ್ನು ನೀಡಿ.
ಮಾನ್ಯ ಮುಖ್ಯಮಂತ್ರಿಯವರೇ ನಾನು ವಾಸ್ತವಾಂಶಗಳನ್ನು ತಮ್ಮ ಗಮನಕ್ಕೆ ತಂದಿರುತ್ತೇನೆ. ನಾನು ಸಂಸ್ಥೆಯಲ್ಲಿ 33 ವರುಷ ಸೇವೆ ಸಲ್ಲಿಸಿಯೂ ಸಹ ಇನ್ನೂ ಬೆಂಗಳೂರು ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುತ್ತೇನೆ.
ನನ್ನ ಸೇವೆ ಪ್ರಾಮಾಣಿಕವಾಗಿರುತ್ತದೆ. ಹಾಗೂ ನನಗೆ ಮತದಾನ ಮಾಡುವ ಹಕ್ಕು ಬಂದಾಗಿನಿಂದ ಈವರೆಗೆ ನಡೆದ ಎಲ್ಲಾ ಚುನಾವಣೆಯಲ್ಲಿ ನಮ್ಮ ಕುಟುಂಬ ಯಾವುದೇ ಪ್ರತಿಫಲ ಅಪೇಕ್ಷಿಸದೆ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತಾ ಬಂದಿರುತ್ತೇವೆ. (ಒಮ್ಮೆ ಮಾತ್ರ ದೇಶದ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಬೇಕೆಂಬ ಮಹದಾಸೆಯಿಂದ ಭಾರತೀಯ ಜನತಾ ಪಕ್ಷಕ್ಕೆ ಮತ ಚಲಾಯಿಸಿರುತ್ತೇವೆ). ತಮ್ಮ ಮನಸ್ಸಿಗೆ ನೋವಾಗುವ ಶಬ್ದಗಳನ್ನು ನಾನು ಬಳಸಿದ್ದರೆ ಕ್ಷಮೆಯಿರಲಿ ಎಂದು ಪತ್ರದಲ್ಲಿ ಹೇಳಿದ್ದಾರೆ.

