HomeKarnatakaವಿಕಲಚೇತನರಿಗೆ ಗುಡ್ ನ್ಯೂಸ್: ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಗಂಭೀರ ಚಿಂತನೆ

ವಿಕಲಚೇತನರಿಗೆ ಗುಡ್ ನ್ಯೂಸ್: ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಗಂಭೀರ ಚಿಂತನೆ

ಚಿತ್ರದುರ್ಗ: ವಿಕಲಚೇತನರಿಗೆ ಈಗ ನೀಡಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಗಂಭೀರ ಚಿಂತನೆ ರಾಜ್ಯ ಸರ್ಕಾರದ ಮುಂದಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಸೋಮವಾರ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್, ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ(ಅಲಿಂಕೋ) ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ಸಿ.ಎಸ್.ಆರ್ ಹಾಗೂ ಅಡಿಪ್ ಯೋಜನೆಯಡಿ ದಿವ್ಯಾಂಗ ವ್ಯಕ್ತಿಗಳಿಗೆ ಉಚಿತ ಸಾಧನ ಮತ್ತು ಸಲಕರಣೆಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರಿಗೆ ಹಲವಾರು ಯೋಜನೆಗಳನ್ನು ಸರ್ಕಾರದ ಮಟ್ಟದಲ್ಲಿ ಜಾರಿ ಮಾಡಲಾಗಿದೆ.  ಇದರೊಂದಿಗೆ ಬ್ಯಾಂಕುಗಳು ಸಹ ವಿಕಲಚೇತನರು ಸ್ವ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯಗಳನ್ನು ನೀಡಬೇಕು. ಸ್ವಾತಂತ್ರ್ಯ ನಂತರ ವಿಕಲಚೇತನರನ್ನು ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ಮಾಜಿ ಪ್ರಧಾನಮಂತ್ರಿ ದಿವಂಗತ ಇಂದಿರಾಗಾಂಧಿ ಓಂಕಾರ ಹಾಕಿದರು.  ವಿಕಲಚೇತನರಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ಒದಗಿಸಿತು. 108 ವಿಧದ ವಿಕಲಚೇತನರನ್ನು ಸರ್ಕಾರದಿಂದ ಗುರುತಿಸಲಾಗಿದೆ. ಇವರನ್ನು ಮುಖ್ಯವಾಹಿನಿಗೆ ತರಲು ಸಾರ್ವಜನಿಕರ ಬೆಂಬಲ ಅಗತ್ಯವಾಗಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು 2014 ರಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ವಿಕಲಾಂಗರು ಎನ್ನುವ ಪದವನ್ನು ಬದಲಿಸಿ, ದಿವ್ಯಾಂಗರು ಎನ್ನುವ ಪದವನ್ನು  ಚಲಾವಣೆಗೆ ತಂದು ವಿಕಲಚೇತನರಿಗೆ ಗೌರವ ಸಲ್ಲಿಸಿ ಸಾಮಾಜಿಕ ಕಳಕಳಿ ಮೆರೆದರು. ಪದ ಬದಲಾವಣೆ ಮಾಡುವ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಹಾಗೂ ಗೌರವದಿಂದ ಬದುಕಲು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ವಿಕಲಚೇತನರನ್ನು ಸಮಾಜದಲ್ಲಿ ಕೀಳಾಗಿ ನೋಡಬಾರದು. ದಿವ್ಯಾಂಗರನ್ನು ಅಪ್ಪಿಕೊಂಡು ಪ್ರಗತಿ ಸಾಧಿಸಬೇಕು. ಭಾರತ ದೇಶ ದಿವ್ಯಾಂಗರನ್ನು ಹೊರತುಪಡಿಸಿ ಪ್ರಗತಿ ಕಾಣಲು ಸಾಧ್ಯವಿಲ್ಲ. ಇಂದು ಹಲವಾರು ದಿವ್ಯಾಂಗರು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ತಂದು ಕೀರ್ತಿ ಗೌರವ ಹೆಚ್ಚು ಮಾಡಿದ್ದಾರೆ.  ಈ ಹಿಂದೆ ದೇಶದಲ್ಲಿ 7 ರೀತಿಯ ಅಂಗವಿಕಲತೆಯನ್ನು ಗುರುತಿಸಲಾಗುತ್ತಿತ್ತು. ಇದರಿಂದ ಉದ್ಯೋಗ ಹಾಗೂ ಉನ್ನತ ವಿದ್ಯಾಭ್ಯಾಸದಲ್ಲಿ ವಿಕಲಚೇತನರು ಸ್ಥಾನಗಳನ್ನು ಪಡೆಯುವಲ್ಲಿ ತೊಂದರೆಯಾಗುತ್ತಿತ್ತು. 2014 ರಲ್ಲಿ ವಿಕಲಚೇತನರ ಕಾಯ್ದೆಗೆ ತಿದ್ದುಪಡಿ ತಂದು 21 ತರಹದ ಅಂಗವಿಕಲತೆಯನ್ನು ಗುರುತಿಸಲಾಗಿದೆ. ಆಸಿಡ್ ದಾಳಿಗೆ ತುತ್ತಾದವರಿಗೆ ದಿವ್ಯಾಂಗರ ಪಟ್ಟಿ ಸೇರಿಸಿ ಸರ್ಕಾರಿ ಉದ್ಯೋಗದಲ್ಲಿ ಅವಕಾಶ ನೀಡಲಾಗಿದೆ ಎಂದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಿದ್ದರು. ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತ ರಾಘವೇಂದ್ರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾಧಿಕಾರಿ ವೆಂಕಟೇಶ್.ಟಿ, ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಗಿರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಎಸ್.ಬಿ.ಐ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಗಜೇಂದ್ರ ಕುಮಾರ್, ಇತರೆ ಶಾಖೆಗಳ ಮುಖ್ಯ ವ್ಯವಸ್ಥಾಪಕರುಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular