HomeKarnatakaಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವವರಿಗೆ ಯಾವುದೇ ವಸ್ತ್ರ ಸಂಹಿತೆ ಜಾರಿ ಮಾಡಿಲ್ಲ. ಎಲ್ಲಾ ಜಾತಿ, ಧರ್ಮದವರು...

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವವರಿಗೆ ಯಾವುದೇ ವಸ್ತ್ರ ಸಂಹಿತೆ ಜಾರಿ ಮಾಡಿಲ್ಲ. ಎಲ್ಲಾ ಜಾತಿ, ಧರ್ಮದವರು ದೇವಸ್ಥಾನಕ್ಕೆ ಬರಬಹುದು: ಸಿಎಂ ಸಿದ್ಧರಾಮಯ್ಯ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಇಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಚಾಮುಂಡೇಶ್ವರಿ ಪ್ರಾಧಿಕಾರವನ್ನು ಸರ್ಕಾರ ರಚಿಸಿದ್ದು, ಹಿಂದೆ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯಡಿ ಕಾರ್ಯನಿರ್ವಾಹಕ ಅಧಿಕಾರಿಗಳು ದೇವಸ್ಥಾನದ ಅಭಿವೃದ್ಧಿ ಮತ್ತು ಭಕ್ತಾದಿಗಳಿಗೆ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದರು. ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವೂ ರಚನೆಯಾಗಿದೆ. ಹುಲಿಗೆಮ್ಮ ದೇವಸ್ಥಾನ ಮಹದೇಶ್ವರ ದೇವಸ್ಥಾನ, ಸವದತ್ತಿಯ ಯಲ್ಲಮ್ಮ, ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೂ ಪ್ರಾಧಿಕಾರವನ್ನು ಸರ್ಕಾರ ರಚಿಸಿದೆ ಎಂದರು.

ಚಾಮುಂಡಿ ಕ್ಷೇತ್ರ ಮತ್ತು ಬೆಟ್ಟಕ್ಕೆ ಸೇರಿದ 23 ದೇವಾಲಯಗಳ ಅಭಿವೃದ್ಧಿ ಹಾಗೂ ಭಕ್ತಾದಿಗಳಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂಬ ಉದ್ದೇಶದಿಂದ ಪ್ರಾಧಿಕಾರ ರಚನೆಯಾಗಿದೆ. ಹಿಂದೆ ಬಸ್ ನಿಲ್ದಾಣ, ವಾಹನ ನಿಲುಗಡೆ ಮತ್ತು ಮಳಿಗೆಗಳ ನಿರ್ಮಾಣವಾಗಿದೆ. ಹಿಂದೆ ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳನ್ನು ಕೂಡಲೇ ಪೂಣಗೊಳಿಸಲು ಸೂಚನೆ ನೀಡಲಾಗಿದೆ. 2018 ರಲ್ಲಿ ಕುಡಿಯುವ ನೀರಿನ ಕಾಮಗಾರಿ ಮಂಜೂರಾಗಿದ್ದರೂ ಇನ್ನೂ ಪೂರ್ಣವಾಗಿಲ್ಲ. ಅದನ್ನು ಕೂಡಲೇ ಪೂರ್ಣಗೊಳಿಸಲು ನಗರಾಭಿವೃದ್ಧಿ ಪ್ರಾಧಿಕಾರದವರಿಗೆ ಸೂಚನೆ ನೀಡಲಾಗಿದೆ. ಕಸ ವಿಲೇವಾರಿ ಕಾಮಗಾರಿಯ ಸಿವಿಲ್ ಕಾಮಗಾರಿಗಳು ಪೂರ್ಣವಾಗಿದ್ದು, ಈ ತಿಂಗಳೊಳಗೆ ವಿದ್ಯುದ್ದೀಕರಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಸ್ವಚ್ಛತೆಗೆ ಗಮನ ಹರಿಸಬೇಕೆಂದು ಸೂಚಿಸಲಾಗಿದೆ. ಚಾಮುಂಡಿ ದೇವಸ್ಥಾನ ಮಾತ್ರವಲ್ಲದೇ ಎಲ್ಲಾ ದೇವಸ್ಥಾನಗಳಲ್ಲಿಯೂ ಸ್ವಚ್ಛತೆಯನ್ನು ಕಾಪಾಡಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಾಧಿಕಾರದಲ್ಲಿ ಒಟ್ಟು 169.22 ಕೋಟಿ ಲಭ್ಯವಿದ್ದು, ದೇವಾಲಯದ ಉಳಿತಾಯ ಖಾತೆಯಲ್ಲಿ 20.24 ಕೋಟಿ ರೂ.ಗಳು ಲಭ್ಯವಿದೆ. 2023-24 ರಲ್ಲಿ 49.64 ಕೋಟಿ ರೂ.ಗಳ ಆದಾಯ, 28.18 ಕೋಟಿ ನಿವ್ವಳ ಆದಾಯ ಬಂದಿದೆ. ಜುಲೈ ಕೊನೆಯವರೆಗೆ 17.4 ಕೋಟಿ ಆದಾಯ ಬಂದಿದ್ದು, 6.97 ಕೋಟಿ ವೆಚ್ಚವಾಗಿದೆ. ಪ್ರತಿ ವರ್ಷ ಆದಾಯ ಹೆಚ್ಚಾಗುತ್ತಿದೆ. ಅಂದರೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿರುವ ದೇವಿಕೆರೆ, ನಂದಿ ಪ್ರತಿಮೆ ಅಭಿವೃದ್ಧಿಗೆ ತೀರ್ಮಾನ ಮಾಡಲಾಗಿದೆ. ಶಾಸಕರು ಹಾಗೂ ಸಚಿವರು ವ್ಯಕ್ತ ಮಾಡಿರುವ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಧಿಕಾರ ಕೆಲಸ ಮಾಡುತ್ತದೆ. ಬೆಟ್ಟಕ್ಕೆ ಬರುವ ಮೆಟ್ಟಿಲುಗಳನ್ನು ಅಭಿವೃದ್ಧಿಪಡಿಲಾಗುವುದು. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವವರಿಗೆ ಯಾವುದೇ ವಸ್ತ್ರ ಸಂಹಿತೆಯನ್ನು ಜಾರಿ ಮಾಡಿಲ್ಲ. ಎಲ್ಲಾ ಜಾತಿ, ಧರ್ಮದವರು ದೇವಸ್ಥಾನಕ್ಕೆ ಬರಬಹುದು. ರೋಪ್ ವೇ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿಲ್ಲ. ಪರಿಸರವಾದಿಗಳು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಅದನ್ನು ಹಿಂದೆಯೇ ಸ್ಥಗಿತಗೊಳಿಸಲಾಗಿದೆ ಎಂದರು.

ದೇವಾಲಯಗಳಲ್ಲಿ ಅಗತ್ಯವಿರುವೆಡೆ ಸಿಸಿಟಿವಿ ಅಳವಡಿಸಬೇಕೆಂದು ತೀರ್ಮಾನಿಸಿ, ಯೂನಿಯನ್ ಬ್ಯಾಂಕ್ ನವರು ಸಿಎಸ್‌ಆರ್ ನಿಧಿಯಿಂದ ಸಿಸಿ ಟಿವಿಗಳ ಅಳವಡಿಕೆಗೆ ಸಹಕಾರ ನೀಡಲಿದ್ದಾರೆ. ದೇವಸ್ಥಾನದ ಸುತ್ತಮುತ್ತ ದೀಪದ ವ್ಯವಸ್ಥೆಗೊಳಿಸುವ ಜೊತೆಗೆ ಈ ಪ್ರದೇಶದಲ್ಲಿ ಅಪರಾಧಗಳನ್ನು ನಿಗ್ರಹಿಸಲು ಒಂದು ಟಾಸ್ಕ್ ಫೋರ್ಸ್ ಅನ್ನು ರಚನೆ ಮಾಡಲಾಗುವುದು.

ಚಾಮುಂಡಿ ಬೆಟ್ಟದ ಮೇಲೆ ಧೂಮಪಾನ, ಮದ್ಯಪಾನ, ಗುಟ್ಕಾ ಸೇವನೆ ಸಂಪೂರ್ಣ ನಿಷೇದಿಸಲಾಗಿದೆ. ಬೆಟ್ಟದ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ತೀರ್ಮಾನಿಸಲಾಗಿದೆ. ಪ್ರಸಾದ ಯೋಜನೆಯನ್ನು ಕೇಂದ್ರ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಜಾರಿಗೊಳಿಸಲು ಅನುಮೋದನೆ ನೀಡಲಾಗಿದ್ದು, ಈ ಯೋಜನೆಗೆ ಹೆಚ್ಚುವರಿಯಾಗಿ ಬೇಕಾಗುವ 11 ಕೋಟಿ ರೂ.ಗಳನ್ನು ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದಿಂದ ಭರಿಸಲಾಗುವುದು. ದೇವಾಲಯದ ಒಳಗೆ ಛಾಯಾಗ್ರಹಣವನ್ನು ನಿಷೇದಿಸಲಾಗಿದ್ದು, ಮೊಬೈಲ್ ಗಳನ್ನು ಬಂದ್ ಮಾಡಿಕೊಳ್ಳುವ ಆದೇಶ ನೀಡಲಾಗುವುದು.

ಪ್ರಸನ್ನ ಕೃಷ್ಣ ಸ್ವಾಮಿ ದೇವಾಲಯ, ಗಾಯತ್ರಿಯಮ್ಮನವರ ದೇವಾಲಯ, ಭುವನೇಶ್ವರಿ ಅಮ್ಮನವರ ದೇವಾಲಯ ಕೋಟೆ ಆಂಜನೇಯ ದೇವಾಲಯ, ವರಾಹಸ್ವಾಮಿ ದೇವಾಲಯಗಳ ಈ ಐದು ದೇವಾಲಯಗಳ ಸಮೂಹದ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳಲಾಗುವುದು. ಇಲ್ಲಿ ಕರ್ತವ್ಯನಿರ್ವಹಿಸುವ ಖಾಯಂ ಸಿಬ್ಬಂದಿಗಳಿಗೆ ವೈದ್ಯಕೀಯ ಸೌಲಭ್ಯ ಹಾಗೂ ಅವರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.

ಚಾಮುಂಡಿಬೆಟ್ಟ ಕ್ಷೇತ್ರವನ್ನು ಹೆಚ್ಚು ಆಕರ್ಷಣೀಯವಾಗಿ ಮಾಡುವ ಜೊತೆಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಇಲ್ಲಿನ ದಾಸೋಹ ಭವನದ ವ್ಯವಸ್ಥೆಗಳನ್ನು ಸುಧಾರಿಸಿ, ಭಕ್ತಾದಿಗಳಿಗೆ ಶುಚಿ ರುಚಿಯಿರುವಂತಹ ಊಟ ವ್ಯವಸ್ಥೆಗಳನ್ನು ಮಾಡಲು ತೀರ್ಮಾನಿಸಲಾಗಿದೆ. ಚಾಮುಂಡಿಕ್ಷೇತ್ರದ ಪ್ರಾಧಿಕಾರದಲ್ಲಿ 169 ಕೋಟಿ ಖಾಯಂ ಠೇವಣಿ ಇದ್ದು, ಇದರ ಆದಾಯದಲ್ಲಿ ಈ ಎಲ್ಲ ವೆಚ್ಚಗಳನ್ನು ಭರಿಸಬಹುದಾಗಿದೆ.

ದೇವಸ್ಥಾನದ ಆಸ್ತಿಯಾಗಿರುವ ಭೂಮಿ ಒತ್ತುವರಿ ಆಗಿರುವ ಸಾಧ್ಯತೆಯಿರುವುದರಿಂದ, ಅವುಗಳ ಸರ್ವೇ ಮಾಡಲು ತಿಳಿಸಲಾಗಿದ್ದು, ಸರ್ವೆ ನಡೆಸಿದ ವರದಿಯನ್ನು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಮಂಡಿಸಲು ಸೂಚಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular