ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ನಿವೃತ್ತಿ ನಿರ್ಧಾರ ಹಿಂಪಡೆಯಲಿದ್ದು, ಪಂಜಾಬ್ ತಂಡದ ಪರವಾಗಿ ಮತ್ತೆ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.
ತಮ್ಮ ನಿವೃತ್ತಿ ನಿರ್ಧಾರವನ್ನು ವಾಪಸ್ ಪಡೆಯಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಯುವರಾಜ್ ಪತ್ರ ಬರೆದಿದ್ದಾರೆ. ಪಂಜಾಬ್ ತಂಡದ ಪರವಾಗಿ ದೇಶಿ ಕ್ರಿಕೆಟ್ ನಲ್ಲಿ ಆಡಲು ಯುವರಾಜ್ ಸಿಂಗ್ ತೀರ್ಮಾನ ಕೈಗೊಂಡಿದ್ದಾರೆ. ತಮ್ಮ ನಿವೃತ್ತಿ ಹಿಂಪಡೆಯಲು ಅವಕಾಶ ನೀಡುವಂತೆ ಬಿಸಿಸಿಐಗೆ ಪತ್ರ ಬರೆದು ಕೋರಿದ್ದಾರೆ ಎಂದು ಹೇಳಲಾಗಿದೆ.
2011 ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪಾತ್ರ ಮಹತ್ವದ್ದಾಗಿತ್ತು. ಸರಣಿ ಶ್ರೇಷ್ಠ ಆಟಗಾರ ಗೌರವಕ್ಕೆ ಅವರು ಪಾತ್ರರಾಗಿದ್ದರು.
ದೇಶಿ ಟಿ20ಯಲ್ಲಿ ಪಂಜಾಬ್ ತಂಡದ ಪರವಾಗಿ ಆಡಲು ಅವರು ಒಪ್ಪಿಕೊಂಡಿದ್ದಾರೆ. ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಪುನೀತ್ ಬಾಲಿ ಈ ಕುರಿತು ಮನವಿ ಮಾಡಿದ್ದು, ಇದಕ್ಕೆ ಒಪ್ಪಿದ ಯುವರಾಜ್ ಪಂಜಾಬ್ ತಂಡದ ಪರವಾಗಿ ಕಣಕ್ಕಿಳಿಯಲು ನಿವೃತ್ತಿ ನಿರ್ಧಾರ ವಾಪಸ್ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.