ಬೆಂಗಳೂರು: ಶನಿವಾರ ರಾತ್ರಿ ಹೊರಮಾವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರಾಜ್ಯದ ಯುವ ಫುಟ್ಬಾಲ್ ಆಟಗಾರ ಕೆ. ಮೋನಿಷ್(28) ಮೃತಪಟ್ಟಿದ್ದಾರೆ.
ಬೆಂಗಳೂರು ಈಗಲ್ಸ್ ತಂಡದ ಸೆಂಟರ್ ಮಿಡ್ ಫೀಲ್ಡರ್ ಆಗಿ ಮೋನಿಷ್ ಆಡುತ್ತಿದ್ದರು. ಅವರು ತಂದೆ, ತಾಯಿ ಮತ್ತು ಸಹೋದರಿಯನ್ನು ಅವರು ಅಗಲಿದ್ದಾರೆ.
ಮೋನಿಷ್ ಅವರು ಹಿಂದೆ ಪರಿಕ್ರಮ ಎಫ್.ಸಿ., ಡೆಕ್ಕನ್ ಎಫ್.ಸಿ., ಯಂಗ್ ಚಾಲೆಂಜರ್ಸ್ ಎಫ್.ಸಿ., ಸಿಐಎಲ್ ತಂಡಗಳ ಪರವಾಗಿ ಆಡಿದ್ದಾರೆ. ಪ್ರಸ್ತುತ ಬಿಡಿಎಫ್ಎ ಎ ಡಿವಿಜನ್ ಲೀಗ್ ಚಾಂಪಿಯನ್ ಶಿಪ್ ನಲ್ಲಿ ಆಡುತ್ತಿದ್ದರು. ಅವರ ನಿಧನದ ಹಿನ್ನೆಲೆಯಲ್ಲಿ 23 ರಂದು ನಿಗದಿಯಾಗಿದ್ದ ಬ್ಲಿಡ್ಜ್ ಎಫ್.ಸಿ. ಮತ್ತು ಬೆಂಗಳೂರು ಈಗಲ್ಸ್ ನಡುವಿನ ಪಂದ್ಯವನ್ನು ಬಿಡಿಎಫ್ಎ ಮುಂದೂಡಿದೆ.
ಸಿಎಂ ಸಂತಾಪ
ರಾಜ್ಯದ ಖ್ಯಾತ ಫುಟ್‌ಬಾಲ್ ಆಟಗಾರ ಮೊನೀಶ್.ಕೆ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗುತ್ತಾರೆಂದು ನಂಬಿದ್ದೆ, ಈಗ ಆ ನಂಬಿಕೆ ಹುಸಿಯಾಗಿದೆ. ಕ್ರೀಡಾ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದ್ದ ಯುವ ಪ್ರತಿಭೆಯೊಂದು ಹೀಗೆ ಆರಂಭದಲ್ಲೇ ಅಂತ್ಯ ಕಂಡಿದ್ದು ಅತ್ಯಂತ ದುಃಖದ ವಿಚಾರ. ಮೃತ ಯುವಕನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.