
ಕ್ರಿಕೆಟ್ ನಲ್ಲಿ ಬ್ಯಾಟ್ಸ್ ಮನ್ ಔಟ್ ಮಾಡಲು ಅನೇಕ ವಿಧಾನಗಳಿವೆ. ಅವುಗಳಲ್ಲಿ ಮಂಕಡಿಂಗ್ ಸಹ ಒಂದು. ಈ ಮಂಕಡಿಂಗ್ ಕ್ರಿಕೆಟ್‌ನಲ್ಲಿ ಹೊಸ ವಿಚಾರವಲ್ಲದೇ ಇದ್ದರೂ ಸಹ 2019ರ ಐಪಿಎಲ್‌ನಲ್ಲಿ ರವಿಚಂದ್ರನ್ ಅಶ್ವಿನ್ ಇದನ್ನು ಮತ್ತೆ ನೆನಪಿಗೆ ಬರುವಂತೆ ಮಾಡಿದ್ದರು.
ಆಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿದ್ದ ಅಶ್ವಿನ್, ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದಲ್ಲಿ ಜಾಸ್ ಬಟ್ಲರ್ ವಿಕೆಟ್ ಅನ್ನು ಹೀಗೆ ಮಂಕಡಿಂಗ್ ಮಾಡುವ ಮೂಲಕ ಪಡೆದಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳಾಗಿದ್ದವು.
ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಇದೇ ಅಶ್ವಿನ್, ಬೆಂಗಳೂರು ತಂಡದ ಆರೋನ್ ಫಿಂಚ್ ಗೆ ಬೌಲಿಂಗ್ ಮಾಡುವ ವೇಳೆ ಮಂಕಡಿಂಗ್ ಮಾಡುವ ವಾರ್ನಿಂಗ್ ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಮಂಕಡಿಂಗ್ ಮೂಲಕ ಅಶ್ವಿನ್ ಭಾರೀ ಸುದ್ದಿ ಮಾಡುತ್ತಿದ್ದಾರೆ.