ನಮೀಬಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿದೆ. ಈ ಪಂದ್ಯದ ವೇಳೆ ಭಾರತ ತಂಡದ ರಿಷಬ್ ಪಂತ್ ತೋರಿದ ವರ್ತನೆ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಗೆದ್ದಿದೆ.
ನಮೀಬಿಯಾದ ನಿಕೋಲ್ ಲಾಫ್ಟಿ ಈಟನ್ ಅವರು ರನ್ ಪೂರ್ಣಗೊಳಿಸಲು ಹತಾಶವಾಗಿ ಡೈವ್ ಮಾಡಿದಾಗ ಅವರ ಬ್ಯಾಟ್ ಸ್ಟಂಪ್‌ನಲ್ಲಿದ್ದ ರಿಷಬ್ ಪಂತ್ ಅವರ ಕಾಲಿಗೆ ತಗುಲಿದೆ. ಕಾಲಿಗೆ ಬ್ಯಾಟ್ ತಗುಲುವುದನ್ನು ತಪ್ಪಿಸಲು ರಿಷಬ್ ಪಂತ್ ಪ್ರಯತ್ನಿಸಿ ಜಂಪ್ ಮಾಡಿದರೂ ಅವರ ಎಡಗಾಲಿಗೆ ಬ್ಯಾಟ್ ತಾಗಿದೆ.
ಕೂಡಲೇ ತಮ್ಮ ಕೈಯಿಂದ ಬ್ಯಾಟ್ ಮುಟ್ಟಿದ ರಿಷಬ್ ಪಂತ್ ನಮಸ್ಕರಿಸುತ್ತಾರೆ. ಬ್ಯಾಟ್ ಮುಟ್ಟಿದ ಕೈಯನ್ನು ಎದೆಗೆ ಹತ್ತಿರಕ್ಕೆ ತಂದುಕೊಳ್ಳುತ್ತಾರೆ. ಕ್ರಿಕೆಟ್ ವೀಕ್ಷಿಸುತ್ತಿದ್ದ ಅಭಿಮಾನಿಗಳು ಈ ದೃಶ್ಯವನ್ನು ಕಂಡು ರಿಷಬ್ ಪಂತ್ ಅವರನ್ನು ಶ್ಲಾಘಿಸಿದ್ದಾರೆ. ಕ್ರಿಕೆಟ್ ಬ್ಯಾಟ್ ಅನ್ನು ಅವರು ಪವಿತ್ರವೆಂದು ಪರಿಗಣಿಸಿದ್ದಾರೆ. ಅದಕ್ಕೆ ಅಗೌರವವಾಗದಂತೆ ನೋಡಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿಯ ಅನ್ವಯ ಅವರ ವರ್ತನೆ ಕಂಡು ಬಂದಿದೆ ಎಂದು ಅಭಿಮಾನಿಗಳು ಶ್ಲಾಘಿಸಿದ್ದಾರೆ. ಹೀಗೆ ಬ್ಯಾಟ್ ಗೌರವಿಸುವ ಮೂಲಕ ರಿಷಬ್ ಪಂತ್ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.