ಮಾಸ್ಕೋ: ರಷ್ಯಾ –ಉಕ್ರೇನ್ ಯುದ್ಧದ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪಡೆದುಕೊಂಡಿದ್ದ ಗೌರವ ಟೇಕ್ವಾಂಡೋ ಬ್ಲಾಕ್ ಬೆಲ್ಟ್ ಅನ್ನು ವಿಶ್ವ ಟೇಕ್ವಾಂಡೋ ಸಂಸ್ಥೆ ಹಿಂಪಡೆದುಕೊಂಡಿದೆ.
ವಿಶ್ವ ಟೇಕ್ವಾಂಡೋ ತನ್ನ ಧ್ಯೇಯವಾಕ್ಯವನ್ನು ‘ವಿಜಯಕ್ಕಿಂತ ಶಾಂತಿ ಹೆಚ್ಚು ಅಮೂಲ್ಯವಾದುದು’ ಎಂದು ಉಲ್ಲೇಖಿಸಿದೆ. ಉಕ್ರೇನ್ನಲ್ಲಿ ರಷ್ಯಾದ ಮಿಲಿಟರಿ ಕ್ರಮವನ್ನು ಖಂಡಿಸಿದ್ದು, ಮುಗ್ಧ ಜೀವಗಳ ಮೇಲಿನ ಕ್ರೂರ ದಾಳಿ ಇದಾಗಿದೆ. ಕ್ರೀಡೆಯ ಗೌರವ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಇದು ಉಲ್ಲಂಘಿಸುತ್ತದೆ ಎಂದು ಹೇಳಿದೆ.
ಈ ನಿಟ್ಟಿನಲ್ಲಿ, ವಿಶ್ವ ಟೇಕ್ವಾಂಡೋ ನವೆಂಬರ್ 2013 ರಲ್ಲಿ ವ್ಲಾಡಿಮಿರ್ ಪುಟಿನ್ ಅವರಿಗೆ ನೀಡಲಾದ ಗೌರವ 9 ನೇ ಡಾನ್ ಬ್ಲಾಕ್ ಬೆಲ್ಟ್ ಹಿಂಪಡೆಯಲು ನಿರ್ಧರಿಸಿದೆ ಎಂದು ವಿಶ್ವ ಟೇಕ್ವಾಂಡೋ ಆಡಳಿತ ಮಂಡಳಿಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯೊಂದಿಗೆ ಒಗ್ಗಟ್ಟಿನಿಂದ, ಯಾವುದೇ ರಷ್ಯನ್ ಅಥವಾ ಬೆಲರೂಸಿಯನ್ ರಾಷ್ಟ್ರೀಯ ಧ್ವಜಗಳು ಅಥವಾ ಗೀತೆಗಳನ್ನು ವಿಶ್ವ ಟೇಕ್ವಾಂಡೋ ಈವೆಂಟ್ಗಳಲ್ಲಿ ಪ್ರದರ್ಶಿಸಲಾಗುವುದಿಲ್ಲ ಅಥವಾ ನುಡಿಸಲಾಗುವುದಿಲ್ಲ. ವಿಶ್ವ ಟೇಕ್ವಾಂಡೋ ಮತ್ತು ಯುರೋಪಿಯನ್ ಟೇಕ್ವಾಂಡೋ ಯೂನಿಯನ್ ರಷ್ಯಾ ಮತ್ತು ಬೆಲಾರಸ್ನಲ್ಲಿ ಟೇಕ್ವಾಂಡೋ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ ಅಥವಾ ಗುರುತಿಸುವುದಿಲ್ಲ ಎಂದು ಹೇಳಲಾಗಿದೆ.
FIFA ಮತ್ತು UEFA ನಂತಹ ಇತರ ಕ್ರೀಡಾ ಸಂಸ್ಥೆಗಳು ರಷ್ಯಾದ ರಾಷ್ಟ್ರೀಯ ತಂಡಗಳು ಮತ್ತು ಕ್ಲಬ್ಗಳನ್ನು ಸ್ಪರ್ಧೆಯಿಂದ ಅಮಾನತುಗೊಳಿಸಿವೆ.