ದುಬೈ: ಪಾಕಿಸ್ತಾನ ವಿರುದ್ಧ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಐತಿಹಾಸಿಕ ಸೋಲು ಕಂಡಿದೆ. ಏಕದಿನ ಮತ್ತು ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಎಂದೂ ಸೋಲು ಕಾಣದ ಭಾರತ ತಂಡ ಇದೇ ಮೊದಲ ಬಾರಿಗೆ 10 ವಿಕೆಟ್ ಗಳಿಂದ ಸೋಲು ಕಂಡಿದೆ.
ಈ ಪಂದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದ 200 ನೇ ಅಂತರರಾಷ್ಟ್ರೀಯ ಪಂದ್ಯವಾಗಿದೆ. ಟಿ20 ಮಾದರಿಯಲ್ಲಿ ಭಾರತಕ್ಕೆ ಇದು 50 ನೇ ಸೋಲಾಗಿದೆ. ಇದೇ ಮೊದಲ ಬಾರಿಗೆ ಭಾರತ ಟಿ20 ಪಂದ್ಯದಲ್ಲಿ 10 ವಿಕೆಟ್ ಗಳ ಸೋಲು ಕಂಡಿದೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 57 ರನ್ ಗಳಿಸಿದ್ದಾರೆ. 49 ಎಸೆತಗಳನ್ನು ಎದುರಿಸಿದ ಅವರು 5 ಬೌಂಡರಿ, 1 ಸಿಕ್ಸರ್ ಸಹಿತ 57 ರನ್ ಗಳಿಸಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ 500 ರನ್ ಗಳಿಸಿದ್ದಾರೆ. ಇದು ಪಾಕಿಸ್ತಾನ ತಂಡದ ಎದುರು ಆಟಗಾರನೊಬ್ಬನ ಗರಿಷ್ಠ ರನ್ ಆಗಿದೆ. ವಿಶ್ವಕಪ್ ನಲ್ಲಿ 4 ಪಂದ್ಯಗಳಲ್ಲಿ ಪಾಕ್ ವಿರುದ್ಧ ಕೊಹ್ಲಿ 226 ರನ್ ಗಳಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಬಾರಿಗೆ ಔಟಾಗಿದ್ದಾರೆ. 2012, 2014 ಮತ್ತು 2016ರಲ್ಲಿ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಲು ಪಾಕಿಸ್ತಾನಕ್ಕೆ ಸಾಧ್ಯವಾಗಿರಲಿಲ್ಲ.
ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಕೊಹ್ಲಿಗೆ ಇದು ಮೂರನೇ ಅರ್ಧಶತಕವಾಗಿದೆ. ಅಂತರರಾಷ್ಟ್ರೀಯ ಟಿ20 ಯಲ್ಲಿ 29 ನೇ ಅರ್ಧಶತಕವಾಗಿದೆ.