
ದುಬೈ: ನಮಿಬಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಭಾರತ ಅಭಿಯಾನ ಕೊನೆಗೊಳಿಸಿದೆ. ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ ಹೇಳಿದ್ದಾರೆ.
ಭಾರತ ಟಿ20 ತಂಡದ ನಾಯಕನಾಗಿ ಕೊಹ್ಲಿ ಅನೇಕ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 50 ಪಂದ್ಯಗಳಲ್ಲಿ 32 ಪಂದ್ಯ ಜಯಿಸಿದ್ದು, 16 ಪಂದ್ಯಗಳಲ್ಲಿ ಸೋಲು ಕಂಡಿದೆ. ನಾಯಕನಾಗಿ ಕೊನೆ ಪಂದ್ಯವಾಡಿದ ಅವರಿಗೆ ಗೆಲುವಿನೊಂದಿಗೆ ವಿದಾಯ ಹೇಳಲಾಗಿದೆ.
ನಾಯಕನಾಗಿ ಅತಿ ಹೆಚ್ಚು ರನ್(1570) ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಅಂತರರಾಷ್ಟ್ರೀಯ ಟಿ20ಯಲ್ಲಿ ಅತಿವೇಗದ ಒಂದು ಸಾವಿರ ರನ್ ಪೂರೈಸಿದ ಮೊದಲ ಆಟಗಾರ ವಿರಾಟ್ ಕೊಹ್ಲಿ ಆಗಿದ್ದಾರೆ.
ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ ಸರಣಿ ಜಯಿಸಿದ ಏಕೈಕ ನಾಯಕ ಅವರಾಗಿದ್ದಾರೆ. ಸತತ 10 ಪಂದ್ಯಗಳಲ್ಲಿ ಭಾರತ ತಂಡವನ್ನು ಗೆಲುವಿನೊಂದಿಗೆ ಮುನ್ನಡೆಸಿದ್ದು, ಭಾರತದ ಈವರೆಗಿನ ಶ್ರೇಷ್ಠ ಪ್ರದರ್ಶನವಾಗಿದೆ. ವಿರಾಟ್ ಕೊಹ್ಲಿ ಅವರಿಂದ ತೆರವಾಗಲಿರುವ ನಾಯಕನ ಜವಾಬ್ದಾರಿಯನ್ನು ರೋಹಿತ್ ಶರ್ಮಾ ನಿರ್ವಹಿಸುವುದು ಬಹುತೇಕ ಖಚಿತ ಎನ್ನಲಾಗಿದೆ.