ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಅಕ್ಟೋಬರ್ 17 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ವಿಶ್ವಕಪ್ ಮುಗಿದ ನಂತರ ನಾಯಕತ್ವ ತ್ಯಜಿಸಲಿದ್ದಾರೆ ಎನ್ನಲಾಗಿದೆ. ಟಿ20ಯಲ್ಲಿ 45 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿ ಕಾರ್ಯನಿರ್ವಹಿಸಿದ್ದು, 27 ಪಂದ್ಯಗಳಲ್ಲಿ ಗೆಲುವು ದೊರೆತಿದೆ. 14 ಪಂದ್ಯಗಳಲ್ಲಿ ಸೋಲಾಗಿದೆ.
ದುಬೈನಲ್ಲಿ ಟಿ 20 ವಿಶ್ವಕಪ್ ನಂತರ ತಂಡದ ಟಿ 20 ನಾಯಕನ ಸ್ಥಾನದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ನಾಯಕತ್ವ ಬಿಟ್ಟುಕೊಟ್ಟು ಬ್ಯಾಟ್ಸ್ ಮನ್ ಆಗಿ ಮುಂದುವರೆಯುವುದಾಗಿ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ನನ್ನ ಪಯಣದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಅವರಿಲ್ಲದೆ ನಾನು ಅದನ್ನು ಮಾಡಲು ಸಾಧ್ಯವಿಲ್ಲ. ಜೊತೆಗಾರರು, ಸಹಾಯಕ ಸಿಬ್ಬಂದಿ, ಆಯ್ಕೆ ಸಮಿತಿ, ನನ್ನ ತರಬೇತುದಾರರು ಮತ್ತು ನಾವು ಗೆಲ್ಲಲು ಪ್ರಾರ್ಥಿಸಿದ ಪ್ರತಿಯೊಬ್ಬ ಭಾರತೀಯರನ್ನು ನೆನಪಿಸಿಕೊಳ್ಳುತ್ತೇನೆ.
ಕೆಲಸದ ಹೊರೆ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾದ ವಿಷಯವಾಗಿದೆ. ಕಳೆದ 8-9 ವರ್ಷಗಳಲ್ಲಿ ಎಲ್ಲ 3 ಮಾದರಿಯ ಕ್ರಿಕೆಟ್ ನಲ್ಲಿ ಆಡಿ ಮತ್ತು ಕಳೆದ 5-6 ವರ್ಷಗಳಿಂದ ಕ್ಯಾಪ್ಟನ್ ಆಗಿ, ಭಾರತ ತಂಡವನ್ನು ಮುನ್ನಡೆಸಿದ್ದೇನೆ. ಟೆಸ್ಟ್, ಏಕದಿನ, ಟಿ20 ಕ್ಯಾಪ್ಟನ್ ಆಗಿದ್ದ ಸಮಯದಲ್ಲಿ ನಾನು ಎಲ್ಲವನ್ನೂ ತಂಡಕ್ಕೆ ನೀಡಿದ್ದೇನೆ. ಟಿ20 ತಂಡದಲ್ಲಿ ಬ್ಯಾಟ್ಸ್ ಮನ್ ಆಗಿ ಮುಂದುವರಿಯುತ್ತೇನೆ. ಈ ನಿರ್ಧಾರಕ್ಕೆ ಬರಲು ಸಾಕಷ್ಟು ಸಮಯ ಹಿಡಿಯಿತು.
ನನ್ನ ಆಪ್ತರಾದ ರವಿ ಭಾಯಿ ಮತ್ತು ರೋಹಿತ್ ಅವರೊಂದಿಗೆ ಸಾಕಷ್ಟು ಆಲೋಚನೆ ಮತ್ತು ಚರ್ಚೆಗಳ ನಂತರ, ಅಕ್ಟೋಬರ್‌ನಲ್ಲಿ ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಂತರ ಟಿ20 ನಾಯಕನ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ.
ನಾನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ, ಎಲ್ಲಾ ಆಯ್ಕೆಗಾರರೊಂದಿಗೆ ಮಾತನಾಡಿದ್ದೇನೆ. ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಭಾರತೀಯ ಕ್ರಿಕೆಟ್ ಮತ್ತು ಭಾರತೀಯ ತಂಡದ ಸೇವೆ ಮುಂದುವರಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.