7 ವರ್ಷಗಳ ಕಾಲ ಭಾರತ ತಂಡವನ್ನು ಮುನ್ನಡೆಸಿದ ನಂತರ ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸುತ್ತಿದ್ದಂತೆ, ಟೀಂ ಇಂಡಿಯಾದ ODI ಮತ್ತು T20I ನಾಯಕ ರೋಹಿತ್ ಶರ್ಮಾ ಅವರು ಆಘಾತಕ್ಕೊಳಗಾಗಿರುವುದಾಗಿ ಹೇಳಿದ್ದಾರೆ.
ಆದಾಗ್ಯೂ, ಕೊಹ್ಲಿ ಅವರ ಭವಿಷ್ಯಕ್ಕಾಗಿ ಶುಭ ಹಾರೈಸಿದ ರೋಹಿತ್, ಭಾರತ ತಂಡದ ನಾಯಕನಾಗಿ ಯಶಸ್ವಿ ಪ್ರದರ್ಶನಕ್ಕಾಗಿ ಕೊಹ್ಲಿ ಅವರನ್ನು ಅಭಿನಂದಿಸಿದ್ದಾರೆ.
ಇನ್‌ಸ್ಟಾಗ್ರಾಮ್ ನಲ್ಲಿ ರೋಹಿತ್, “ಆಘಾತವಾಗಿದೆ !! ಆದರೆ ಭಾರತದ ನಾಯಕನಾಗಿ ಯಶಸ್ವಿ ಪ್ರದರ್ಶನ ನೀಡಿದಕ್ಕಾಗಿ ಅಭಿನಂದನೆಗಳು. ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಇಂತಹ ಉತ್ತಮ ದಾಖಲೆಯ ಹೊರತಾಗಿಯೂ, ಕೇಪ್ ಟೌನ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 1-2 ಟೆಸ್ಟ್ ಸರಣಿಯನ್ನು ಸೋತ ಒಂದು ದಿನದ ನಂತರ ಕೊಹ್ಲಿ ತಮ್ಮ ಘೋಷಣೆಯ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ. 2014 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್ ಟೆಸ್ಟ್ ನಲ್ಲಿ ಭಾರತವನ್ನು ಮೊದಲ ಬಾರಿಗೆ ನಾಯಕತ್ವ ವಹಿಸಿದ್ದ ಕೊಹ್ಲಿ, ಎಂ.ಎಸ್. ಧೋನಿ ನಂತರ ಪೂರ್ಣ ಸಮಯದ ನಾಯಕನಾದರು. 2014ರ ಡಿಸೆಂಬರ್‌ನಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಡ್ರಾ ಆದ ನಂತರ ಧೋನಿ ಅವರು ನಿವೃತ್ತಿ ಘೋಷಿಸಿದರು.
ಕೊಹ್ಲಿ ಅತ್ಯಂತ ಯಶಸ್ವಿ ನಾಯಕನಾಗಿದ್ದು, ಅವರ ನಾಯಕತ್ವದ ಅವಧಿಯಲ್ಲಿ, ಭಾರತ 68 ಟೆಸ್ಟ್ ಗಳನ್ನು ಆಡಿ 40 ರಲ್ಲಿ ಗೆದ್ದಿದೆ, 17 ರಲ್ಲಿ ಸೋತಿದೆ ಮತ್ತು 11 ಪಂದ್ಯಗಳನ್ನು ಡ್ರಾ ಮಾಡಿದೆ, ಗೆಲುವಿನ ಶೇಕಡವಾರು 58.82 ನೊಂದಿಗೆ ಸಾಗರೋತ್ತರ ಮತ್ತು ಸ್ವದೇಶಿ ನೆಲದಲ್ಲಿ ಸ್ಮರಣೀಯ ಗೆಲುವುಗಳನ್ನು ದಾಖಲಿಸಿದೆ.
ಗ್ರೇಮ್ ಸ್ಮಿತ್, ರಿಕಿ ಪಾಂಟಿಂಗ್ ಮತ್ತು ಸ್ಟೀವ್ ವಾ ಮಾತ್ರ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಗಿಂತ ಹೆಚ್ಚು ಪಂದ್ಯಗಳನ್ನು ಗೆದ್ದಿದ್ದಾರೆ.