ಪಾರ್ಲ್: ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಟಿ20, ಏಕದಿನ, ಟೆಸ್ಟ್ ಪಂದ್ಯಗಳ ತಂಡದ ನಾಯಕತ್ವ ತೊರೆದ ವಿರಾಟ್ ಕೊಹ್ಲಿ ಟೀಂ ಇಂಡಿಯಾದಲ್ಲಿ ಸಾಮಾನ್ಯ ಆಟಗಾರನಾಗಿ ಆಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಪಾರ್ಲ್ ನ ಬೋಲಂಡ್ ಪಾರ್ಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಪರಾಭವಗೊಂಡಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 51 ರನ್ ಗಳಿಸುವುದರೊಂದಿಗೆ ಮತ್ತೊಂದು ದಾಖಲೆ ಬರೆದಿದ್ದಾರೆ.
ಏಕದಿನ ಕ್ರಿಕೆಟ್ ನಲ್ಲಿ ವಿದೇಶಿ ನೆಲದಲ್ಲಿ ಭಾರತದ ಪರವಾಗಿ ಗರಿಷ್ಠ ರನ್ ಗಳಿಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಹಿಂದಿಕ್ಕಿದ್ದಾರೆ. ಸಚಿನ್ ತೆಂಡೂಲ್ಕರ್ 5065 ರನ್ ದಾಖಲೆ ಹಿಂದಿಕ್ಕಿದ ಕೊಹ್ಲಿ ವಿದೇಶಿ ನೆಲದಲ್ಲಿ 5108 ರನ್ ಗಳಿಸಿದ್ದಾರೆ.
50 ಓವರ್ಗಳ ಸ್ವರೂಪದಲ್ಲಿ ಹೆಚ್ಚು ರನ್ ಗಳ ಒಟ್ಟಾರೆ ಪಟ್ಟಿಯಲ್ಲಿ ಈಗ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ(5,518) ಅಗ್ರಸ್ಥಾನದಲ್ಲಿದ್ದರೆ, ರಿಕಿ ಪಾಂಟಿಂಗ್(5,090) ಎರಡನೇ ಸ್ಥಾನದಲ್ಲಿದ್ದಾರೆ.
ಪಂದ್ಯದಲ್ಲಿ ಕೊಹ್ಲಿ 27 ನೇ ರನ್ ತಲುಪಿದಾಗ ಇಬ್ಬರು ಭಾರತೀಯ ಬ್ಯಾಟಿಂಗ್ ದಿಗ್ಗಜರಾದ ದ್ರಾವಿಡ್ ಮತ್ತು ಗಂಗೂಲಿಯನ್ನು ಮೀರಿಸಿದರು.
ಏಕದಿನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ 2,001 ರನ್ ಗಳಿಸಿದ್ದಾರೆ. ಈಗ ದಕ್ಷಿಣ ಆಫ್ರಿಕಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಕೊಹ್ಲಿ ಆರನೇ ಸ್ಥಾನದಲ್ಲಿದ್ದಾರೆ. ತೆಂಡೂಲ್ಕರ್ ಹೊರತುಪಡಿಸಿ, ರಿಕಿ ಪಾಂಟಿಂಗ್(1,879), ಕುಮಾರ್ ಸಂಗಕ್ಕಾರ(1,789), ಸ್ಟೀವ್ ವಾ(1,581), ಮತ್ತು ಶಿವನಾರಾಯಣ ಚಂದ್ರಪಾಲ್(1,559) ನಂತರದ ಸ್ಥಾನಗಳಲ್ಲಿದ್ದಾರೆ.