
ಕ್ರಿಕೆಟ್ ಪಂದ್ಯದ ವೇಳೆ ‘ನೋ ಬಾಲ್’ ಸಿಗ್ನಲ್ ಪ್ರದರ್ಶಿಸಿದ ಕಾರಣ ಅಂಪೈರ್ ಹತ್ಯೆ ಮಾಡಲಾಗಿದೆ. ಭಾನುವಾರ ಒಡಿಶಾದ ಕಟಕ್ ನಲ್ಲಿ ಘಟನೆ ನಡೆದಿದೆ.
ಮೃತರನ್ನು 22 ವರ್ಷದ ಲಕ್ಕಿ ರಾವುತ್ ಎಂದು ಗುರುತಿಸಲಾಗಿದ್ದು, ‘ನೋ ಬಾಲ್’ ಸಿಗ್ನಲ್ ಕುರಿತು ಜಗಳದ ನಂತರ ಸ್ಮೃತಿ ರಂಜನ್ ರೌತ್ ಎಂಬಾತ ಚಾಕುವಿನಿಂದ ಇರಿದು ಕೊಂದಿದ್ದಾನೆ. ಲಕ್ಕಿ ರಾವುತ್ ಮೈದಾನದಲ್ಲಿ ಹರಿತವಾದ ಚಾಕುವಿನಿಂದ ಇರಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ನಂತರ ಆರೋಪಿಯನ್ನು ಮೈದಾನದಲ್ಲಿದ್ದವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇರಿತಕ್ಕೊಳಗಾದ ಲಕ್ಕಿ ರಾವುತ್ ಅವರನ್ನು ಕೂಡಲೇ ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಬ್ರಹ್ಮಪುರ ಮತ್ತು ಶಂಕರಪುರ ಎಂಬ ಎರಡು ತಂಡಗಳ ನಡುವಿನ ಪಂದ್ಯದ ವೇಳೆ ಘಟನೆ ನಡೆದಿದ್ದು, ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.