ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಅವನಿ ಲೇಖಾರಾ ಚಿನ್ನದ ಪದಕ ಗಳಿಸಿದ್ದಾರೆ. ಮಹಿಳೆಯರ 10 ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್ 1 ಸ್ಪರ್ಧೆಯಲ್ಲಿ ಭಾರತದ ಮೊದಲ ಚಿನ್ನ ಗೆದ್ದರು.
ಮೊದಲು, ಏಸ್ ಶೂಟರ್ ಅರ್ಹತಾ ಸುತ್ತಿನಲ್ಲಿ ಒಟ್ಟು 621.7 ಅಂಕಗಳೊಂದಿಗೆ ಏಳನೇ ಸ್ಥಾನ ಪಡೆದ ಅವರು, ಉತ್ತಮ ಪ್ರದರ್ಶನದ ಮೂಲಕ ಫೈನಲ್ ನಲ್ಲಿ ಮುನ್ನಡೆ ಸಾಧಿಸಿದರು. ಅವನಿ ಉತ್ತಮ ಚೇತರಿಕೆ ಪ್ರದರ್ಶಿಸಿ ಅರ್ಹತಾ ಅಂತಿಮ ಸುತ್ತಿನಲ್ಲಿ 104.1 ಅಂಕಗಳನ್ನು ಗಳಿಸುವ ಮೊದಲು ಆಟದಲ್ಲಿ ತನ್ನ ಮೂರನೆಯ ಮತ್ತು ನಾಲ್ಕನೇ ಪ್ರಯತ್ನದಲ್ಲಿ 104.9, 104.8 ಉತ್ತಮ ಅಂಕಗಳನ್ನು ದಾಖಲಿಸಿದರು.
ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಫೈನಲ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಹೈ ಜಂಪರ್ ನಿಶಾದ್ ಕುಮಾರ್ ಕೂಡ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರು. ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ವಿನೋದ್ ಕುಮಾರ್ ಪುರುಷರ ಡಿಸ್ಕಸ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಅವನಿ ಚಿನ್ನ ಗೆಲ್ಲುವುದರೊಂದಿಗೆ ಭಾರತಕ್ಕೆ ನಾಲ್ಕನೇ ಪದಕ ತಂದಿದ್ದಾರೆ.
ಅವನಿ ಚಿನ್ನ ಗೆದ್ದಿರುವುದಕ್ಕೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಅಸಾಧಾರಣ ಪ್ರದರ್ಶನ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವನಿ ಲೇಖರಾ ಕಷ್ಟಪಟ್ಟು ಮತ್ತು ಅರ್ಹತೆಯಿಂದ ಚಿನ್ನದ ಪದ ಗೆದ್ದಿದ್ದು ಅವರಿಗೆ ಅಭಿನಂದನೆಗಳು, ನಿಮ್ಮ ಶ್ರಮಶೀಲ ಸ್ವಭಾವ ಮತ್ತು ಶೂಟಿಂಗ್ ಕಡೆಗೆ ಉತ್ಸಾಹದಿಂದಾಗಿ ಇದು ಸಾಧ್ಯವಾಗಿದೆ. ಭಾರತೀಯ ಕ್ರೀಡೆಗಳಿಗೆ ಇದು ನಿಜಕ್ಕೂ ವಿಶೇಷ ಕ್ಷಣ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.