ನವದೆಹಲಿ: ಭಾರತ ಬಾಕ್ಸಿಂಗ್ ಫೆಡರೇಶನ್(ಬಿಎಫ್‌ಐ) ತನಗೆ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಆರೋಪಿಸಿದ್ದಾರೆ.
ತನ್ನ ಕೋಚ್ ಗಳಲ್ಲಿ ಒಬ್ಬರಿಗೆ ಕಾಮನ್‌ವೆಲ್ತ್ ಗೇಮ್ಸ್ ವಿಲೇಜ್‌ಗೆ ಪ್ರವೇಶ ನಿರಾಕರಿಸಲಾಗಿದೆ. ಇನ್ನೊಬ್ಬರನ್ನು ಮನೆಗೆ ಕಳುಹಿಸಲಾಗಿದೆ ಎಂದು ಲೊವ್ಲಿನಾ ಹೇಳಿದರು.
ಟೋಕಿಯೊ 2020 ರಲ್ಲಿ ಮಹಿಳೆಯರ 69 ಕೆಜಿ ಕಂಚಿನ ಪದಕವನ್ನು ಗೆದ್ದಾಗ ಲೊವ್ಲಿನಾ ಇತಿಹಾಸ ಸೃಷ್ಠಿಸಿದ್ದರು. ವಿಜೇಂದರ್ ಸಿಂಗ್(ಬೀಜಿಂಗ್ 2008 ರಲ್ಲಿ ಕಂಚು) ಮತ್ತು ಮೇರಿ ಕೋಮ್(ಲಂಡನ್ 2012 ರಲ್ಲಿ ಕಂಚು) ನಂತರ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಬಾಕ್ಸರ್ ಎನಿಸಿಕೊಂಡಿದ್ದರು.
ಬಾಕ್ಸಿಂಗ್ ಫೆಡರೇಶನ್ ನಲ್ಲಿ ಪ್ರಚಲಿತದಲ್ಲಿರುವ ರಾಜಕೀಯದ ಬಗ್ಗೆ ಅವರು ಜಾಲತಾಣದಲ್ಲಿ ಬರೆದಿದ್ದಾರೆ. ರಾಜಕೀಯವನ್ನು ಬದಿಗಿಟ್ಟು ದೇಶಕ್ಕಾಗಿ ಪದಕ ಗೆಲ್ಲುವತ್ತ ಗಮನ ಹರಿಸಬೇಕು ಎಂದು ಹೇಳಿದ್ದು, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ತನ್ನ ಈವೆಂಟ್ ಗೆ ಕೇವಲ 8 ದಿನಗಳ ಮೊದಲು ತನ್ನ ತರಬೇತಿಯ ಮೇಲೆ ಪರಿಣಾಮ ಬೀರಿದೆ ಎಂದು ದೂರಿದ್ದಾರೆ.
ನನಗೆ ಕಿರುಕುಳ ನೀಡಲಾಗುತ್ತಿದೆ ಎಂಬುದನ್ನು ಬಹಳ ದುಃಖದಿಂದ ಬಹಿರಂಗಪಡಿಸಲು ಬಯಸುತ್ತೇನೆ. ನನಗೆ ಒಲಂಪಿಕ್ ಪದಕ ಗೆಲ್ಲಲು ಸಹಾಯ ಮಾಡಿದ ತರಬೇತುದಾರರನ್ನು ತೆಗೆದುಹಾಕಲಾಗಿದೆ. ಅದು ನನ್ನ ತರಬೇತಿ ಪ್ರಕ್ರಿಯೆಗೆ ಅಡ್ಡಿಯಾಗಿದೆ. ತರಬೇತುದಾರರಲ್ಲಿ ಒಬ್ಬರು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ಸಂಧ್ಯಾ ಗುರುಂಗ್ಜಿ ಎಂದು ತಿಳಿಸಿದ್ದಾರೆ.
https://twitter.com/LovlinaBorgohai/status/1551520397832720385