ಅಹಮದಾಬಾದ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್ ಹಾಗೂ 25 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಹಲವು ದಾಖಲೆಗೆ ಟೀಂ ಇಂಡಿಯಾ ಪಾತ್ರವಾಗಿದೆ.
520 ಅಂಕಗಳೊಂದಿಗೆ ಟೆಸ್ಟ್ ವಿಶ್ವ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಟೆಸ್ಟ್ ವಿಶ್ವಕಪ್ ಫೈನಲ್ ಗೆ ಲಗ್ಗೆ ಇಟ್ಟಿದೆ. ಐಸಿಸಿ ವಿಶ್ವ ಚಾಂಪಿಯನ್ ಶಿಪ್ ಇಲ್ಲವೇ ವಿಶ್ವಕಪ್ ನ ಎಲ್ಲಾ ಮೂರು ಮಾದರಿಯಲ್ಲಿ ಫೈನಲ್ ಪ್ರವೇಶಿಸಿದ ವಿಶ್ವದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ.
1983, 2003, 2011 ರ ಏಕದಿನ ವಿಶ್ವಕಪ್ ನಲ್ಲಿ ಭಾರತ ಫೈನಲ್ ಪ್ರವೇಶಿಸಿದ್ದು, 2007, 2014 ರಲ್ಲಿ ಟಿ-20ವಿಶ್ವಕಪ್ ಪಂದ್ಯಗಳನ್ನಾಡಿದ್ದು, ಈಗ ಟೆಸ್ಟ್ ವಿಶ್ವಕಪ್ ಫೈನಲ್ ಗೆ ಲಗ್ಗೆ ಇಟ್ಟಿದೆ.
2011ರ ಏಕದಿನ, 2014ರ ಟಿ20 ವಿಶ್ವಕಪ್ ಫೈನನ್ ನಲ್ಲಿ ಆಡಿದ್ದ ವಿರಾಟ್ ಕೊಹ್ಲಿ ಈಗ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ವಿಶ್ವಕಪ್ ಫೈನಲ್ ನಲ್ಲಿ ಕೂಡ ಆಡಲಿದ್ದಾರೆ.
ಟೆಸ್ಟ್ ರ್ಯಾಂಕಿಂಗ್ನಲ್ಲಿ ಭಾರತ ತಂಡ ಮತ್ತೆ ನಂಬರ್ ಒನ್ ಆಗಿದೆ. ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ ಐಸಿಸಿ ಟೆಸ್ಟ್ ತಂಡಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.
ಈ ಪಂದ್ಯದ ಗೆಲುವಿನೊಂದಿಗೆ ಸತತ 10 ಟೆಸ್ಟ್ ಗೆದ್ದ ರಿಕಿ ಪಾಂಟಿಂಗ್ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ.
ಟೆಸ್ಟ್ ಸರಣಿಯೊಂದರಲ್ಲಿ ಶತಕದೊಂದಿಗೆ 30 ಕ್ಕೂ ಹೆಚ್ಚು ವಿಕೆಟ್ ಗಳಿಸಿದ ಐದನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ.
ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅತಿ ಹೆಚ್ಚು 12 ಪಂದ್ಯಗಳನ್ನು ಭಾರತ ತಂಡ ಗೆದ್ದಿದೆ.
ಆರ್. ಅಶ್ವಿನ್ ಸರಣಿ ಶ್ರೇಷ್ಠ ಪುರಸ್ಕೃತರಾಗಿದ್ದಾರೆ. ಈ ಸರಣಿಯಲ್ಲಿ 32 ವಿಕೆಟ್ ಹಾಗೂ ಶತಕದೊಂದಿಗೆ 189 ರನ್ ಗಳಿಸಿದ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯುತ್ತಿರುವುದು ಎಂಟನೇ ಬಾರಿಯಾಗಿದೆ. ಅತಿ ಹೆಚ್ಚು ಸಲ ಸರಣಿಶ್ರೇಷ್ಠ ಪುರಸ್ಕೃತರಾದವರ ಪಟ್ಟಿಯಲ್ಲಿ ಅಶ್ವಿನ್ ಪಾಕಿಸ್ತಾನದ ಇಮ್ರಾನ್ ಖಾನ್ ಅವರೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 11 ಸಲ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿ ಮೊದಲ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ 9 ಸಲ ಸರಣಿ ಶ್ರೇಷ್ಟ ಪ್ರಶಸ್ತಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.