ಧರ್ಮಶಾಲಾ: ಬ್ಯಾಟಿಂಗ್ ಸ್ವರ್ಗ ಎನಿಸಿದ ಧರ್ಮಶಾಲಾ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
2 -0 ಅಂತರದಿಂದ ಮೂರು ಪಂದ್ಯಗಳ ಸರಣಿ ಜಯಿಸಿದ ಭಾರತಕ್ಕೆ ತವರಲ್ಲಿ ಸತತ 7ನೇ ಸರಣಿ ಗೆಲುವು ಇದಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಕೊನೆಯ 5 ಓವರ್ ಗಳಲ್ಲಿ 80 ರನ್ ಗಳಿಸಿ ಸವಾಲಿನ ಮೊತ್ತ ಪೇರಿಸಿತು. ಪಾಥುವನ್ 75, ಧನುಷ್ಕ ಗುಣತಿಲಕ 38, ದಾಸುನ್ ಶನಕ ಅಜೇಯ 47 ರನ್ ಗಳಿಸಿದರು. ಭಾರತದ ಪರವಾಗಿ ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬುಮ್ರಾ, ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ್ದ ಭಾರತ ಶ್ರೇಯಸ್ ಐಯರ್ ಸ್ಪೋಟದ ಬ್ಯಾಟಿಂಗ್ ನೆರವಿನಿಂದ 17.1 ಓವರುಗಳಲ್ಲಿ 3 ವಿಕೆಟ್ 186 ರನ್ ಗಳಿಸಿ ಗೆಲುವಿನ ನಗೆ ಬೀರಿತು. ರೋಹಿತ್ ಶರ್ಮಾ 1, ಕಿಶನ್ ಕಿಶನ್ 16, ಶ್ರೇಯಸ್ ಅಯ್ಯರ್ ಅಜೇಯ 74, ಸ್ಯಾಮ್ಸನ್ 39, ರವೀಂದ್ರ ಜಡೇಜಾ ಅಜೇಯ 45 ರನ್ ಗಳಿಸಿದರು. ಲಂಕಾ ಪರವಾಗಿ ಲಹಿರು ಕುಮಾರ 2, ದುಷ್ಯಂತ ಚಮೀರಾ 1 ವಿಕೆಟ್ ಪಡೆದರು.
ವೈಟ್ ವಾಷ್ ಮೇಲೆ ಕಣ್ಣು:
ಇಂದು ಸಂಜೆ ಮೂರನೇ ಟಿ20 ಪಂದ್ಯ ನಡೆಯಲಿದೆ. ಈಗಾಗಲೇ 2 -0 ಅಂತರದಿಂದ ಸರಣಿ ಗೆದ್ದಿರುವ ಭಾರತ ವೈಟ್ ವಾಷ್ ಮೇಲೆ ಕಣ್ಣಿಟ್ಟಿದೆ. ಇಂದಿನ ಪಂದ್ಯವನ್ನು ಗೆದ್ದರೆ ಭಾರತ ಹ್ಯಾಟ್ರಿಕ್ ಸರಣಿ ವೈಟ್ ಸಾಧನೆ ಮಾಡಿದಂತಾಗುತ್ತದೆ. ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಭಾರತ 3 -0 ಅಂತರದಿಂದ ಸರಣಿ ಜಯಿಸಿತ್ತು.
ರೋಹಿತ್ ಶರ್ಮಾ ದಾಖಲೆ:
ಭಾರತ ತಂಡದ ನಾಯಕ ರೋಹಿತ್ ಶರ್ಮ ತವರಿನಲ್ಲಿ 17 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ. ತವರಿನಲ್ಲಿ ಅತಿಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ನಾಯಕರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನ ಇಯಾನ್ ಮಾರ್ಗನ್, ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ತಲಾ 15 ಗೆಲುವು ದಾಖಲಿಸಿದ್ದಾರೆ.