ಅಹ್ಮದಾಬಾದ್: ಟಿ20 ಪಂದ್ಯಗಳಲ್ಲಿ ಉತ್ತಮ ಆರಂಭಿಕ ಜೋಡಿ ಕಂಡುಕೊಳ್ಳಲು ಟೀಂ ಇಂಡಿಯಾಕ್ಕೆ ಕಾಲ ಕೂಡಿ ಬಂದಿದೆ. ಇನ್ನು ಮುಂದೆ ಕಾಯಂ ಆಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ.
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಆರಂಭಿಕ ಜೋಡಿಯಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿ 54 ಎಸೆತಗಳಲ್ಲಿ 94 ರನ್ ಕಲೆಹಾಕಿದ್ದರು.
ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, ಮುಂದಿನ ಟಿ20 ವಿಶ್ವಕಪ್ ವರೆಗೆ ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸುವುದಾಗಿ ತಿಳಿಸಿದ್ದಾರೆ.
ಐಪಿಎಲ್ ನಲ್ಲಿಯೂ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವುದಾಗಿ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಅತ್ಯುತ್ತಮ ಬ್ಯಾಟ್ಸ್ ಮನ್ ಗಳಿಗೆ ಸಾಕಷ್ಟು ಎಸೆತಗಳನ್ನು ಆಡಲು ಅವಕಾಶ ದೊರೆಯದಿರುವುದರಿಂದ ಇದು ಒಳ್ಳೆಯ ಬೆಳವಣಿಗೆ ಎನ್ನಲಾಗಿದೆ.
ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಸೀಮಿತ ಓವರ್ ಗಳ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟ್ಸ್ ಮನ್ ಗಳಿಗೆ ಹೆಚ್ಚು ಓವರ್ ಗಳಲ್ಲಿ ಆಡಲು ಅವಕಾಶ ಸಿಗಲಿದೆ. ಕೆ.ಎಲ್. ರಾಹುಲ್ ಫಾರ್ಮ್ ಕಳೆದುಕೊಂಡಿರುವುದರಿಂದ ಇದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.