ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಆಟಗಾರರಿಗೆ ಕೊರೋನಾ ನೆಗೆಟಿವ್ ವರದಿ ಬಂದಿದೆ. ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ರಿಪೋರ್ಟ್ ಬರುತ್ತಿದ್ದಂತೆ ಎಲ್ಲಾ ಆಟಗಾರರು ಆಸ್ಟ್ರೇಲಿಯಾದಲ್ಲಿ ಹೊರಾಂಗಣ ತರಬೇತಿಯನ್ನು ಕೈಗೊಂಡಿದ್ದಾರೆ.
ಸಿಡ್ನಿ ಒಲಿಂಪಿಕ್ ಪಾರ್ಕ್ ಒಳಗಿನ ಬ್ಲಾಕ್ ಇಂಟರ್ ನ್ಯಾಷನಲ್ ಸ್ಫೋರ್ಟ್ಸ್ ಪಾರ್ಕ್ ನಲ್ಲಿ ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ, ಕುಲದೀಪ್ ಯಾದವ್, ಹನುಮ ವಿಹಾರಿ, ಮೊಹಮ್ಮದ್ ಸಿರಾಜ್ ಅವರು ಲಘು ತರಬೇತಿ ನಡೆಸಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಿಡ್ನಿಯಲ್ಲಿ ಶನಿವಾರ ಮೊದಲ ದಿನದ ತರಬೇತಿಯನ್ನು ಮುಗಿಸಿದೆ.
ದುಬೈನಲ್ಲಿ ಐಪಿಎಲ್ ಫೈನಲ್ ಪಂದ್ಯ ಮುಗಿದ ಒಂದು ದಿನದ ನಂತರ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಟೀಂ ಇಂಡಿಯಾ 14 ದಿನಗಳ ಕ್ವಾರಂಟೈನ್ ನಲ್ಲಿದೆ. ಈ ಅವಧಿಯಲ್ಲಿ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. ಕೊರೋನಾ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಹೊರಾಂಗಣ ತರಬೇತಿ ನಡೆಸಲಾಗಿದೆ. ಶನಿವಾರದಿಂದ ಆಟಗಾರರು ತರಬೇತಿ ಕೈಗೊಂಡಿದ್ದಾರೆ.
ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ತಲಾ 3 ಏಕದಿನ, ಟಿ20 ಹಾಗೂ ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನವೆಂಬರ್ 27 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಎಲ್ಲಾ 3 ಪಂದ್ಯಗಳು ಸಿಡ್ನಿಯಲ್ಲಿ ನಡೆಯಲಿವೆ.
ಡಿಸೆಂಬರ್ 4 ರಿಂದ ಟಿ20 ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 17 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಅಡಿಲೇಡ್ ನಲ್ಲಿ ಡೇ -ನೈಟ್ ಟೆಸ್ಟ್ ಪಂದ್ಯ ನಡೆಯಲಿದೆ. ಮೆಲ್ಬೋರ್ನ್ ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯಲಿದೆ. ತಂದೆಯಾಗಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊನೆಯ ಮೂರು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಉಪನಾಯಕ ಅಜಿಂಕ್ಯಾ ರೆಹಾನೆ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.