ದುಬೈ: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇಂದು ಸೂಪರ್ ಫೋರ್ ಪಂದ್ಯ ನಡೆಯಲಿದೆ. ಎರಡನೇ ಬಾರಿಗೆ ಪಾಕಿಸ್ತಾನ ತಂಡವನ್ನು ಬಗ್ಗು ಬಡಿಯಲು ಭಾರತ ಸಜ್ಜಾಗಿದೆ.
ಸೂಪರ್ ಫೋರ್ ಹಂತದಲ್ಲಿ ಒಟ್ಟು ನಾಲ್ಕು ತಂಡಗಳಿದ್ದು, ಪ್ರತಿ ತಂಡ ಉಳಿದ ಮೂರು ತಂಡಗಳನ್ನು ತಲಾ ಒಮ್ಮೆ ಮುಖಾಮುಖಿ ಆಗಬೇಕಿದೆ. ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಗಳಿಸುವ ತಂಡಗಳು ಸೆಪ್ಟೆಂಬರ್ 11 ರಂದು ನಡೆಯಲಿರುವ ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ.
ಕಳೆದ ಭಾನುವಾರ ಎ ಗುಂಪಿನ ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 5 ವಿಕೆಟ್ ಗಳ ಅಂತರದಿಂದ ಭಾರತ ಸೋಲಿಸಿತ್ತು. ಒಂದು ಎಸೆತ ಬಾಕಿ ಇರುವಂತೆಯೇ 147 ರನ್ ಗಳಿಗೆ ಪಾಕಿಸ್ತಾನ ತಂಡವನ್ನು ಆಲ್ ಔಟ್ ಮಾಡಿದ್ದ ಭಾರತ ತಂಡ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಅವರ ನೆರವಿನಿಂದ ಎರಡು ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತ್ತು.
ಇಂದು ರಾತ್ರಿ 7.30 ಕ್ಕೆ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ಪಂದ್ಯ ಆರಂಭವಾಗಲಿದೆ. ಟಿ20 ಮಾದರಿಯಲ್ಲಿ ಒಟ್ಟು 10 ಸಲ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದು, ಭಾರತ 8 ಪಂದ್ಯಗಳಲ್ಲಿ, ಪಾಕಿಸ್ತಾನ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.