ದುಬೈ: ಕ್ರಿಕೆಟ್ ಜಗತ್ತಿನ ಬದ್ಧವೈರಿಗಳೆಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಜಗತ್ತಿನ ಶ್ರೀಮಂತ ನಗರಗಳಲ್ಲಿ ಒಂದಾದ ದುಬೈನಲ್ಲಿ ಇಂದು ಏಷ್ಯಾ ಕಪ್ 15ನೇ ಆವೃತ್ತಿಯ ಪಂದ್ಯ ನಡೆಯಲಿದೆ.
ಕ್ರಿಕೆಟ್ ಜಗತ್ತಿನ ಗಮನ ಸೆಳೆದ ಇಂದಿನ ಪಂದ್ಯ ಭಾರಿ ಕುತೂಹಲ ಮೂಡಿಸಿದೆ. 10 ತಿಂಗಳ ಹಿಂದೆ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಎದುರು 10 ವಿಕೆಟ್ ಗಳ ಅಂತರದಿಂದ ಭಾರತ ತಂಡ ಹೀನಾಯವಾಗಿ ಸೋತಿತ್ತು. ಈ ಸೋಲಿನ ಸೇಡು ತೀರಿಸಿಕೊಳ್ಳಲು ಇಂದು ಭಾರತ ಕಾತರಿಸುತ್ತಿದೆ.
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಇದು 100ನೇ ಟಿ20 ಪಂದ್ಯವಾಗಿದೆ. ಕ್ರಿಕೆಟ್ ನ ಮೂರು ಮಾದರಿಗಳಲ್ಲಿ 100 ಪಂದ್ಯಗಳನ್ನಾಡಿದ ವಿಶ್ವದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಭಾಜನರಾಗಲಿದ್ದಾರೆ. ನ್ಯೂಜಿಲೆಂಡ್ ನ ರಾಸ್ ಟೇಲರ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಭಾರತ ಪಾಕಿಸ್ತಾನ ತಂಡಗಳು ಟಿ20 ಯಲ್ಲಿ 9 ಸಲ ಮುಖಾಮುಖಿಯಾಗಿದ್ದು, ಭಾರತ 7 ಬಾರಿ ಜಯ ದಾಖಲಿಸಿದೆ. ಪಾಕಿಸ್ತಾನ ಎರಡು ಪಂದ್ಯಗಳಲ್ಲಿ ಜಯಗಳಿಸಿದೆ. ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ.
ರೋಹಿತ್ ಶರ್ಮಾ ಮತ್ತು ಬಾಬರ್ ಆಜಂ ನಾಯಕತ್ವದ ಭಾರತ ಮತ್ತು ಪಾಕಿಸ್ತಾನ ತಂಡಗಳು ಇಂದಿನ ಪಂದ್ಯವನ್ನು ಗೆಲ್ಲಲು ಭಾರಿ ಕಾರ್ಯತಂತ್ರವನ್ನೇ ರೂಪಿಸಿವೆ. ರಾತ್ರಿ 7.30 ಕ್ಕೆ ಪಂದ್ಯ ಆರಂಭವಾಗಲಿದ್ದು, ಕ್ರಿಕೆಟ್ ಜಗತ್ತಿನ ಗಮನವೆಲ್ಲ ಇಂದಿನ ಪಂದ್ಯದ ಮೇಲೆ ಕೇಂದ್ರೀಕೃತವಾಗಿದೆ.