ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ ಹಜಾರೆ ಏಕದಿನ ಟೂರ್ನಿಯ ಪಂದ್ಯದಲ್ಲಿ ತಮಿಳುನಾಡು ತಂಡ ಅರುಣಾಚಲ ಪ್ರದೇಶದ ವಿರುದ್ಧ 50 ಓವರ್ ಗಳಲ್ಲಿ 506 ರನ್ ಗಳಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ಈ ಹಿಂದೆ ಪಂದ್ಯವೊಂದರಲ್ಲಿ ಇಂಗ್ಲೆಂಡ್ ತಂಡ ಗಳಿಸಿದ 498 ರನ್ ದಾಖಲೆ ಧೂಳಿಪಟವಾಗಿದೆ.
ಮೊದಲು ಬ್ಯಾಟ್ ಮಾಡಿದ ತಮಿಳುನಾಡು ತಂಡ 50 ಓವರ್ ಗಳಲ್ಲಿ ಎರಡು ವಿಕೆಟ್ ಗೆ 506 ರನ್ ಕಲೆ ಹಾಕಿದೆ. ಕಳೆದ ವರ್ಷ ಪುದುಚೇರಿ ವಿರುದ್ಧ ಮುಂಬೈ 457 ರನ್ ಗಳಿಸಿದ್ದು ವಿಜಯ ಹಜಾರೆ ಎಲ್ಲಿ ದಾಖಲೆಯಾಗಿತ್ತು. ಅರುಣಾಚಲ ಪ್ರದೇಶ ತಂಡವನ್ನು 28.4 ಓವರ್ ಗಳಲ್ಲಿ 71 ರನ್ ಗೆ ಆಲ್ ಔಟ್ ಮಾಡುವ ಮೂಲಕ ತಮಿಳುನಾಡು 435 ರಗಳ ಬೃಹತ್ ಜಯ ದಾಖಲಿಸಿದೆ. ಇದು ಲಿಸ್ಟ್ ಎ ಕ್ರಿಕೆಟ್ ನಲ್ಲಿ ಗರಿಷ್ಠ ಅಂತರದ ಗೆಲುವಾಗಿದೆ.
ತಮಿಳುನಾಡು ತಂಡದ ಬ್ಯಾಟರ್ ನಾರಾಯಣನ್ ಜಗದೀಶನ್ ಏಕದಿನ ಪಂದ್ಯದಲ್ಲಿ 277 ರನ್ ಗಳಿಸುವುದರೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 141 ಎಸೆತಗಳಲ್ಲಿ 277 ರನ್ ಗಳಿಸಿದ ಜಗದೀಶನ್ ಏಕದಿನ ಪಂದ್ಯದಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ್ದಾರೆ(114 ಎಸೆತ).
ಏಕದಿನ ಪಂದ್ಯದಲ್ಲಿ ಮೊದಲ ಬಾರಿಗೆ 400ಕ್ಕೂ ಅಧಿಕ ರನ್ ಜೊತೆಯಾಟ ನಡೆದಿದೆ. ಲಿಸ್ಟ್ ದರ್ಜೆಯ ಏಕದಿನ ಕ್ರಿಕೆಟ್ ನಲ್ಲಿ ಅವರು ಸತತ 5 ಶತಕ ಬಾರಿಸಿದ್ದಾರೆ. ವಿಜಯ ಹಜಾರೆ ಟೂರ್ನಿಯ ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್(15) ಸೇರಿದಂತೆ ಒಂದೇ ದಿನ 5 ದಾಖಲೆ ಬರೆದಿದ್ದಾರೆ.