ತಮಿಳುನಾಡಿನ ರಾಮನಾಥಪುರಂನಲ್ಲಿರುವ ಬೇಕರಿಯೊಂದು ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾರ ಆರು ಅಡಿ ಎತ್ತರದ ಕೇಕ್ ತಯಾರಿಸಿದೆ.
ಬೇಕರಿಯ ಮುಂದೆ ಈ ಕೇಕ್ ಅನ್ನು ಪ್ರದರ್ಶನಕ್ಕೆ ಇಡಲಾಗಿದೆ. ಫುಟ್ಬಾಲ್ ದಂತಕಥೆಗೆ ಗೌರವ ಸಲ್ಲಿಸಲು ತಯಾರಿಸಲಾದ ಈ ಕೇಕ್‌ಗೆ 60 ಕೆಜಿ ಸಕ್ಕರೆ, 270 ಮೊಟ್ಟೆಗಳು ಹಿಡಿದಿವೆ.
“ಕಳೆದ ತಿಂಗಳ ನಿಧನರಾದ ಫುಟ್ಬಾಲ್ ದಂತಕಥೆಗೆ ಶ್ರದ್ಧಾಂಜಲಿ ಸಲ್ಲಿಸಲು ಈ ಕೇಕ್ ತಯಾರಿಸಿದ್ದೇವೆ. ಈ ಮೂಲಕ ಯುವಕರಿಗೆ ಫೋನ್ ಹಾಗೂ ಕಂಫ್ಯೂಟರ್‌ಗಳನ್ನು ಬಿಟ್ಟು ಮೈದಾನಕ್ಕೆ ಬಂದು ಆಟವಾಡಲು ಪ್ರೇರೇಪಣೆ ಕೊಡುತ್ತಿದ್ದೇವೆ” ಎಂದು ಬೇಕರಿಯ ಮಾಲೀಕ ಸತೀಶ್ ರಂಗನಾಥನ್ ತಿಳಿಸಿದ್ದಾರೆ.
ಇದೇ ಬೇಕರಿಯಲ್ಲಿ ಈ ಹಿಂದೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಸಂಗೀತ ಕ್ಷೇತ್ರದ ದಿಗ್ಗಜ ಇಳಯರಾಜ, ತಮಿಳಿನ ಖ್ಯಾತ ಕವಿ ಭಾರತಿಯಾರ್ ಸೇರಿದಂತೆ ಅನೇಕ ದಿಗ್ಗಜರ ಪ್ರತಿಮೆಗಳನ್ನು ಕೇಕ್‌ನಲ್ಲಿ ತಯಾರಿಸಲಾಗಿತ್ತು.