ಆಡಿಲೇಡ್: ವಿಶ್ವಕಪ್ ಟಿ20 ಎರಡನೇ ಸೆಮಿಫೈನಲ್ ಇಂದು ನಡೆಯಲಿದ್ದು, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಮುಖಾಗಲಿವೆ.
ಮೊದಲ ಸೆಮಿಫೈನಲ್ ನಲ್ಲಿ ಜಯಗಳಿಸಿದ ಪಾಕಿಸ್ತಾನ ಫೈನಲ್ ಪ್ರವೇಶಿಸಿದೆ. ಇಂಗ್ಲೆಂಡ್ ಮತ್ತು ಭಾರತ ನಡುವೆ ಇಂದು ನಡೆಯಲಿರುವ ಪಂದ್ಯ ಕುತೂಹಲ ಮೂಡಿಸಿದೆ. ಟಿ20 ಮಾದರಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಬಲಿಷ್ಠ ತಂಡಗಳಾಗಿದ್ದು, ಆಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ವಿಜೇತರಿಗೆ ಫೈನಲ್ ನಲ್ಲಿ ಪಾಕಿಸ್ತಾನ ಎದುರು ಮುಖಾಮುಖಿಯಾಗುವ ಅವಕಾಶ ಸಿಗಲಿದೆ. ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.
ಸೂಪರ್ 12 ಹಂತದಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿದ್ದು, ನಿರ್ಣಾಯಕ ಪಂದ್ಯಗಳಲ್ಲಿ ಮುಗ್ಗರಿಸುವ ಅಭ್ಯಾಸ ಹೊಂದಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯ ಗೆಲುವಿಗೆ ಸಾಕಷ್ಟು ಕಾರ್ಯತಂತ್ರ ರೂಪಿಸಲಾಗಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ನೈಜ ಸಾಮರ್ಥ್ಯ ಓರೆಗೆ ಹಚ್ಚಲು ಸಜ್ಜಾಗಿದ್ದು, ಇಂಗ್ಲೆಂಡ್ ಮಣಿಸಲು ಕಾರ್ಯತಂತ್ರ ರೂಪಿಸಿದೆ.
ಟಿ20 ಮಾದರಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು 22 ಬಾರಿ ಮುಖಾಮುಖಿಯಾಗಿದ್ದು, ಭಾರತ 12 ಬಾರಿ ಇಂಗ್ಲೆಂಡ್ 10 ಬಾರಿ ಜಯಗಳಿಸಿವೆ. ಟಿ20 ವಿಶ್ವಕಪ್ ನಲ್ಲಿ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದು, ಭಾರತ ಎರಡು ಪಂದ್ಯ ಹಾಗೂ ಇಂಗ್ಲೆಂಡ್ ಒಂದು ಪಂದ್ಯ ಜಯಿಸಿದೆ.
ಭಾರತದ ಪರವಾಗಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು, ಇಂದಿನ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ. ಮಧ್ಯಾಹ್ನ 1:30 ಕ್ಕೆ ಪಂದ್ಯ ಆರಂಭವಾಗಲಿದೆ. ಗೆದ್ದ ತಂಡಕ್ಕೆ ಫೈನಲ್ ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.