ಅಬುಧಾಬಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಕ್ರಿಕೆಟ್ ಜಗತ್ತಿನ ಗಮನ ಸೆಳೆದ ಈ ಪಂದ್ಯ ಭಾರೀ ಕುತೂಹಲ ಮೂಡಿಸಿದೆ. ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಎಂದಿಗೂ ಸೋಲದ ದಾಖಲೆಯನ್ನು ಮುಂದುವರೆಸಲು ಟೀಮ್ ಇಂಡಿಯಾ ಸಜ್ಜಾಗಿದೆ. ಗೆಲುವಿಗೆ ಕಾರ್ಯತಂತ್ರ ರೂಪಿಸಿದೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮಹತ್ವದ ಹೇಳಿಕೆ ನೀಡಿದ್ದು, ಪಾಕಿಸ್ತಾನ ಕೂಡ ಉತ್ತಮ ತಂಡವಾಗಿದೆ. ಪಾಕಿಸ್ತಾನ ತಂಡವನ್ನು ಹಗುರವಾಗಿ ಪರಿಗಣಿಸಿಲ್ಲ ಬೇರೆ ತಂಡಗಳ ವಿರುದ್ಧ ಆಡುವಂತೆಯೇ ಪಾಕಿಸ್ತಾನ ತಂಡದ ವಿರುದ್ಧ ಹೋರಾಡುವುದಾಗಿ ಹೇಳಿದ್ದಾರೆ.
ಪಾಕ್ ವಿರುದ್ಧ ಕಣಕ್ಕಿಳಿಯಲಿರುವ ಭಾರತ ತಂಡದ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ, ಮುಂಚೆಯೇ ಬಹಿರಂಗಪಡಿಸಲು ಸಾಧ್ಯವಿಲ್ಲವೆಂದು ಕೊಹ್ಲಿ ತಿಳಿಸಿದ್ದಾರೆ.
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2021ರ ಸೂಪರ್ 12 ಹಂತದಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ನಾವು ಸಮತೋಲಿತವಾದ ತಂಡವನ್ನು ಸಜ್ಜುಗೊಳಿಸಿದ್ದು, ಪಾಕಿಸ್ತಾನ ಕೂಡ ಬಲಿಷ್ಠ ತಂಡವಾಗಿದೆ. ಆ ತಂಡದ ವಿರುದ್ಧ ಭಾರತ ಅತ್ಯುತ್ತಮವಾಗಿ ಆಡಬೇಕಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.