
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ.
ಯುವರಾಜ್ ಸಿಂಗ್ ಕಳೆದ ವರ್ಷ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೂ, ಅವರು ದೇಶಿ ಕ್ರಿಕೆಟ್ ನಲ್ಲಿ ಕಣಕ್ಕಿಳಿಯಲಿದ್ದಾರೆ. ಮುಂದಿನ ತಿಂಗಳು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ ನಡೆಯಲಿದ್ದು ಪಂಜಾಬ್ ತಂಡದ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಸ್ಥಾನ ಪಡೆದುಕೊಂಡಿದ್ದಾರೆ.
2011 ರ ವಿಶ್ವಕಪ್ ನಲ್ಲಿ ಭಾರತ ತಂಡದ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಕಳೆದ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಯುವರಾಜ್ ಸಿಂಗ್ ಜೂನ್ ನಲ್ಲಿ ಮತ್ತೆ ಅಭ್ಯಾಸ ಆರಂಭಿಸಿದ್ದರು. 304 ಅಂತರರಾಷ್ಟ್ರೀಯ ಏಕದಿನ, 40 ಟೆಸ್ಟ್ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಇನ್ನು ಕೇರಳದ ಮಧ್ಯಮ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರು ಕೂಡ ಕೇರಳದ ಸಂಭವನೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಗೆ ಕೇರಳದ 26 ಸಂಭವನೀಯ ಆಟಗಾರರ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಇದರಲ್ಲಿ ಶ್ರೀಶಾಂತ್ ಸ್ಥಾನ ಪಡೆದುಕೊಂಡಿದ್ದಾರೆ. ಈ ತಂಡದಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಇದ್ದಾರೆ.
2013 ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಶ್ರೀಶಾಂತ್ ನಿಷೇಧಕ್ಕೆ ಒಳಗಾಗಿದ್ದರು. ಬಿಸಿಸಿಐ ಇತ್ತೀಚೆಗೆ ನಿಷೇಧ ತೆರವುಗೊಳಿಸಿತ್ತು.