ಕೊಲಂಬೊ: ನಿವೃತ್ತಿ ಘೋಷಿಸಿದ 10 ದಿನಗಳ ನಂತರ, ಶ್ರೀಲಂಕಾ ಬ್ಯಾಟರ್ ಭಾನುಕಾ ರಾಜಪಕ್ಸೆ ತಮ್ಮ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದು, ಅವರು ರಾಷ್ಟ್ರಕ್ಕಾಗಿ ಮತ್ತೊಮ್ಮೆ ಆಡಲು ಬಯಸುವುದಾಗಿ ಹೇಳಿದ್ದಾರೆ.
ಎಡಗೈ ಬ್ಯಾಟ್ಸ್ ಮನ್ ರಾಜಪಕ್ಸೆ ತಮ್ಮ ನಿವೃತ್ತಿಯನ್ನು ಹಿಂಪಡೆದಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್(ಎಸ್‌ಎಲ್‌ಸಿ) ಖಚಿತಪಡಿಸಿದೆ. ಯುವ ಮತ್ತು ಕ್ರೀಡಾ ಸಚಿವರಾದ ನಮಲ್ ರಾಜಪಕ್ಸೆ ಅವರೊಂದಿಗಿನ ಸಭೆಯ ಅನುಸಾರ ಮತ್ತು ರಾಷ್ಟ್ರೀಯ ಆಯ್ಕೆಗಾರರೊಂದಿಗೆ ಸಮಾಲೋಚಿಸಿದ ನಂತರ, ಭಾನುಕಾ ರಾಜಪಕ್ಸೆ ಅವರು 3ನೇ ಜನವರಿ 2022 ರಂದು SLC ಗೆ ಸಲ್ಲಿಸಿದ ರಾಜೀನಾಮೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಹಿಂಪಡೆಯಲು ಬಯಸುವುದಾಗಿ SLC ಗೆ ಸೂಚಿಸಿದ್ದಾರೆ ಮಂಡಳಿಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ SLC ಗೆ ಅವರು ಬರೆದ ಪತ್ರದಲ್ಲಿ, ಮುಂಬರುವ ವರ್ಷಗಳಲ್ಲಿ ಅವರು ಪ್ರೀತಿಸುವ ಆಟದಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲು ಬಯಸುತ್ತಾರೆ ಎಂದು ತಿಳಿಸಲಾಗಿದೆ.
ಲಸಿತ್ ಮಾಲಿಂಗ ಸೇರಿದಂತೆ ಹಲವು ಶ್ರೀಲಂಕಾ ಆಟಗಾರರು ನಿವೃತ್ತಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದರು.
ಅಕ್ಟೋಬರ್ 5, 2019 ರಂದು ಪಾಕಿಸ್ತಾನ ಪ್ರವಾಸದಲ್ಲಿ ರಾಜಪಕ್ಸೆ ತಮ್ಮ T20I ಗೆ ಪಾದಾರ್ಪಣೆ ಮಾಡಿದರು. ಅವರ ODI ವೃತ್ತಿಜೀವನ ಜುಲೈ 2021 ರಲ್ಲಿ ತಮ್ಮ ಚೊಚ್ಚಲ ಪಂದ್ಯದೊಂದಿಗೆ ಆರಂಭವಾಗಿತ್ತು.
ಭಾನುಕಾ ರಾಜಪಕ್ಸೆ ಶ್ರೀಲಂಕಾ ಪರ ಐದು ODI ಮತ್ತು 18 T20I ಪಂದ್ಯಗಳನ್ನು ಆಡಿದ್ದಾರೆ. ಅವರು ಕ್ರಮವಾಗಿ 17.80 ಮತ್ತು 26.66 ಸರಾಸರಿಯಲ್ಲಿ 89 ಮತ್ತು 320 ರನ್ ಗಳಿಸಿದ್ದಾರೆ.
ನಾನು ಆಟಗಾರನಾಗಿ, ಪತಿಯಾಗಿ ನನ್ನ ಸ್ಥಾನವನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸಿದ್ದೇನೆ. ಪಿತೃತ್ವ ಮತ್ತು ಸಂಬಂಧಿತ ಕೌಟುಂಬಿಕ ಜವಾಬ್ದಾರಿಗಳನ್ನು ಎದುರು ನೋಡುತ್ತಿದ್ದೇನೆ ಎಂದು ರಾಜಪಕ್ಸೆ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.