ಬೆಂಗಳೂರು: ಎಲ್ಲಾ ಇಲಾಖೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಪದಕ ಪಡೆದ ರಾಜ್ಯದ ಕ್ರೀಡಾಪಟುಗಳು, ತರಬೇತುದಾರರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಸನ್ಮಾನಿಸಿ, ನಗದು ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.
ಪ್ರಸ್ತುತ ಪೊಲೀಸ್ ಮತ್ತು ಅರಣ್ಯ ಇಲಾಖೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇಕಡ ಎರಡರಷ್ಟು ಮೀಸಲಾತಿ ನೀಡುತ್ತಿದ್ದು, ಇತರೆ ಇಲಾಖೆಗಳಲ್ಲಿಯೂ ಶೇಕಡ ಎರಡರಷ್ಟು ಮೀಸಲಾತಿ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕ್ರೀಡಾಪಟುಗಳು ದೇಶ ಮತ್ತು ರಾಜ್ಯದ ಗೌರವ ಹೆಚ್ಚಿಸಿದ್ದಾರೆ. ಇದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಕಳೆದ ಬಾರಿ 70, ಈ ಬಾರಿ 107 ಪದಕಗಳನ್ನು ಏಷ್ಯನ್ ಗೇಮ್ಸ್ ನಲ್ಲಿ ಕ್ರೀಡಾಪಟುಗಳು ಗೆದ್ದಿದ್ದಾರೆ. ರಾಜ್ಯ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುತ್ತಿದೆ. ರಾಜ್ಯದಿಂದ 8 ಜನ ಪದಕ ಪಡೆದಿದ್ದಾರೆ. ಸಾಧನೆ ಮಾಡಿದ ನಿಮಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.