ನವದೆಹಲಿ: ಹೊಸದಾಗಿ ರಚಿಸಲಾದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಕಾರ್ಯಕಾರಿ ಸಮಿತಿಯನ್ನು ಕ್ರೀಡಾ ಸಚಿವಾಲಯ ರದ್ದುಗೊಳಿಸಿದೆ.
ಪಾರದರ್ಶಕತೆ ಹಾಗೂ ಇತರ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಂಜಯ್ ಸಿಂಗ್ ನೇತೃತ್ವದಲ್ಲಿ ಹೊಸದಾಗಿ ರಚಿಸಲಾದ WFI ಸಂಸ್ಥೆಯನ್ನು ಅಮಾನತು ಮಾಡಲಾಗಿದೆ.
ಹೊಸದಾಗಿ ಆಯ್ಕೆಯಾದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಸಂಜಯ್ ಸಿಂಗ್ U-15 ಮತ್ತು U-20 ರಾಷ್ಟ್ರೀಯ ಪಂದ್ಯಗಳನ್ನು ಗೊಂಡಾದಲ್ಲಿ ನಡೆಸಲಾಗುವುದು ಎಂದು ಘೋಷಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಅವರು ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ವಿರೋಧಿಸಿ ಸಾಕ್ಷಿ ಮಲ್ಲಿಕ್ ಕಣ್ಣೀರಿನೊಂದಿಗೆ ವಿದಾಯ ಹೇಳಿದ್ದರು. ಬಜರಂಗ ಪೂನಿಯಾ ಪದ್ಮಶ್ರೀ ಪ್ರಶಸ್ತಿ ಹಿಂತಿರುಗಿಸಿದ್ದರು. ಗೂಂಗಾ ಪೈಲ್ವಾನ್ ಖ್ಯಾತಿಯ ಕುಸ್ತಿಪಟು ವೀರೇಂದರ್ ಸಿಂಗ್ ಕೂಡ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂತಿರುಗಿಸುವುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಕುಸ್ತಿ ಫೆಡರೇಶನ್ ಆಫ್ ಇಂಡಿಯಾವನ್ನು ಕ್ರೀಡಾ ಸಚಿವಾಲಯವು ಅಮಾನತುಗೊಳಿಸಿದೆ.