ದೇಶಾದ್ಯಂತ ಇರುವ ಯುವ ಕ್ರಿಕೆಟಿಗರಿಗೆ ವೇದಿಕೆ ಸೃಷ್ಟಿಸಿಕೊಡಲು ಬಾಲಿವುಡ್ ನಟ ಸೋನು ಸೂದ್ ತಯಾರಿ ನಡೆಸುತ್ತಿದ್ದಾರೆ.
“ನಾನು ಕ್ರಿಕೆಟರ್ ಆಗಬೇಕೆಂದು ಯಾವಾಗಲೂ ಕನಸು ಕಾಣುತ್ತಿದ್ದೆ, ಆದರೆ ನಮ್ಮ ಪುಟ್ಟ ಪಟ್ಟಣದಲ್ಲಿ ಕ್ರಿಕೆಟ್ ಆಡಲು ಯಾವುದೇ ವೇದಿಕೆ ಇರಲಿಲ್ಲ. ಆದರೆ ಯುವಕರು ಕ್ರಿಕೆಟ್ ಆಡುವುದನ್ನು ನೋಡಿದರೆ ನಿಜವಾಗಲೂ ಖುಷಿಯಾಗುತ್ತದೆ” ಎಂದು ಸೋನು ತಿಳಿಸಿದ್ದಾರೆ.
“ನನಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ಇಷ್ಟ. ಆದರೆ ಆಟ ಆಡಲು ನನಗೆ ಹೆಚ್ಚು ಸಮಯ ಸಿಗಲೇ ಇಲ್ಲ. ನಮ್ಮ ಕೆಲಸದಿಂದ ಕೊಂಚ ಬಿಡುವು ಮಾಡಿಕೊಂಡು ಒಂದಷ್ಟು ನಮ್ಮ ಇಚ್ಛೆಯ ಕೆಲಸದಲ್ಲಿ ಭಾಗಿಯಾಗಬೇಕೆಂದು ನನಗೆ ಅನಿಸುತ್ತದೆ” ಎಂದು ಸೋನು ಹೇಳಿಕೊಂಡಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಮಕ್ಕಳಿಗೆ ಕ್ರಿಕೆಟ್‌ನಲ್ಲಿ ಸ್ಫರ್ಧಿಸಲು ದೊಡ್ಡದೊಂದು ವೇದಿಕೆ ಸೃಷ್ಟಿಸಲು ಕ್ರಿಕ್‌ಫಿಟ್ ಸಂಸ್ಥಾಪಕ ಮಿಖಾಯಿಲ್ ವಾಸ್ವಾನಿ ಜೊತೆಗೆ ಮಾತುಕತೆಯಲ್ಲಿರುವುದಾಗಿ ಸೋನು ಹೇಳಿದ್ದಾರೆ.
ಕೋವಿಡ್1-9 ಸೋಂಕು ಆವರಿಸಿದಾಗಿನಿಂದ ಸುಮಾರು 7.5 ಲಕ್ಷ ವಲಸೆ ಕಾರ್ಮಿಕರನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ ಸೋನು. ಕೋವಿಡ್-19 ಸೋಂಕಿನ ವಿರುದ್ಧ ಮುಂಚೂಣಿಯ ಹೋರಾಟದಲ್ಲಿರುವ ಮಂದಿಗೆ ಮಾಸ್ಕ್‌ಗಳು ಹಾಗೂ ಮುಖದ ಶೀಲ್ಡ್‌ಗಳನ್ನು ಪೂರೈಸಿದ ಸೋನು, ಸಂಕಟದಲ್ಲಿರುವ ರೈತರ ನೆರವಿಗೂ ಧಾವಿಸಿದ್ದಾರೆ. ಪ್ರವಾಸೀ ರೋಜ್‌ಗಾರ್ ಅಪ್ಲಿಕೇಶನ್ ಮೂಲಕ ಕೌಶಲ್ಯ ಇರುವ ನೌಕರರಿಗೆ ಕೆಲಸ ಹುಡುಕಲು ಸೋನು ನೆರವಾಗಿದ್ದಾರೆ.