ಕೊರೊನಾ ನಡುವೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಒಲಂಪಿಕ್ಸ್ ಕ್ರೀಡಾ ಕೂಟಗಳನ್ನು ನಡೆಸಲು ಸಿದ್ದತೆ ಕೈಗೊಳ್ಳಲಾಗಿದೆ. ಕೋರೋಣ ಸಾಂಕ್ರಾಮಿಕ ರೋಗದಿಂದಾಗಿ ಒಂದು ವರ್ಷದ ವಿಳಂಬದ ನಂತರ ಜುಲೈ 23 ರಂದು ಟೋಕಿಯೋ ಒಲಿಂಪಿಕ್ ಆರಂಭವಾಗಲಿದೆ.
ಹಿಂದಿನ ಕ್ರೀಡಾಕೂಟಗಳಲ್ಲಿ ನೀಡಿದಂತೆಯೇ ಟೊಕಿಯೋ ಒಲಂಪಿಕ್ಸ್ ನಲ್ಲಿಯೂ ಕಾಂಡೋಮ್ ಗಳನ್ನು ನೀಡಲಾಗುತ್ತದೆ. ಆದರೆ, ಅದರಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆ ಎದುರಾಗಿದೆ. ಉಚಿತ ಕಾಂಡೋಮ್ ಗಳನ್ನು ನೀಡುವ ಸಂಪ್ರದಾಯವನ್ನು ಟೊಕಿಯೋ ಒಲಿಂಪಿಕ್ಸ್ ನಲ್ಲಿಯೂ ಮುಂದುವರೆಸಲಾಗುವುದು. ಆದರೆ, ಭಾಗಿಯಾಗಿರುವ 11,000 ಕ್ರೀಡಾಪಟುಗಳಿಗೆ ಲೈಂಗಿಕ ಕ್ರಿಯೆ ನಡೆಸದಂತೆ ಸೂಚನೆ ನೀಡಲಾಗಿದೆ. ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕ್ರೀಡಾಪಟುಗಳಿಗೆ ತಿಳಿಸಿ ಉಚಿತವಾಗಿ ಕಾಂಡೋಮ್ ನೀಡುವುದಾದರೂ ಏಕೆ ಎಂಬ ಪ್ರಶ್ನೆ ಎದುರಾಗಿದೆ.
ವಿಶ್ವದ ಶ್ರೇಷ್ಠ ಕ್ರೀಡಾ ಪ್ರದರ್ಶನವಾದ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಜಪಾನ್ ರಾಜಧಾನಿಗೆ ಆಗಮಿಸುವ ಪ್ರತಿ ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ 14 ಕಾಂಡೋಮ್ ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಕ್ರೀಡಾಪಟುಗಳು ಲೈಂಗಿಕ ಕ್ರಿಯೆ ನಡೆಸುವಂತಿಲ್ಲ ಎಂದು ಹೇಳಲಾಗಿದೆ.
ಒಲಿಂಪಿಕ್ಸ್ ನಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತಾಗಿ 33 ಪುಟಗಳ ಪ್ಲೇಬುಕ್ ಬಿಡುಗಡೆ ಮಾಡಲಾಗಿದೆ. ಕ್ರೀಡಾ ಗ್ರಾಮದಲ್ಲಿ ಕಾಂಡೋಮ್ ಗಳನ್ನು ಕೊಡುವುದು ತಮಾಷೆ ಎನಿನ್ನಿಸುತ್ತದೆ ಎನ್ನಲಾಗಿದ್ದರೂ, ಕ್ರೀಡಾಪಟುಗಳು ಒಲಿಂಪಿಕ್ ಗ್ರಾಮದಲ್ಲಿ ಕಾಂಡೊಮ್ ಬಳಸಬೇಕು ಎಂಬುದು ನಮ್ಮ ಉದ್ದೇಶವಲ್ಲ. ಅವುಗಳನ್ನು ಅವರು ತಮ್ಮ ದೇಶಗಳಿಗೆ ಕೊಂಡೊಯ್ಯುವ ಮೂಲಕ ಜಾಗೃತಿಗೆ ಸಹಾಯ ಮಾಡುವುದಾಗಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಹೇಳಿದೆ.
1988 ರ ದಕ್ಷಿಣ ಕೊರಿಯಾ ಸಿಯೋಲ್ ಒಲಿಂಪಿಕ್ಸ್ ವೇಳೆ ಏಡ್ಸ್ ಆತಂಕದ ಕಾರಣ ಕಾಂಡೋಮ್ ವಿತರಿಸಲಾಗಿತ್ತು. ನಂತರದಲ್ಲಿ ಕಾಂಡೊಮ್ ಜೊತೆಗೆ ಜಾಗೃತಿ ಕರಪತ್ರಗಳನ್ನು ಹಂಚುವುದು ಒಂದು ಸಂಪ್ರದಾಯವಾಗಿದೆ. ಏಡ್ಸ್ ಸಾಂಕ್ರಾಮಿಕ ರೋಗ ವ್ಯಾಪಿಸಿದ್ದರಿಂದ ಅದರಿಂದ ದೂರವಿರುವ ಜಾಗೃತಿ ಮೂಡಿಸಲು ಪ್ರತಿ ಒಲಂಪಿಕ್ಸ್ ನಲ್ಲಿಯೂ ಕಾಂಡೋಮ್ ವಿತರಿಸಲಾಗುತ್ತದೆ.
2016 ರ ರಿಯೋ ಒಲಿಂಪಿಕ್ಸ್ ನಲ್ಲಿ ಅತಿಹೆಚ್ಚು ಬರೋಬ್ಬರಿ 4,50,000 ಕಾಂಡೋಮ್ ಗಳನ್ನು ನೀಡಲಾಗಿದ್ದು, ಸರಾಸರಿ ಪ್ರತಿ ಕ್ರೀಡಾಪಟುವಿಗೆ ಸುಮಾರು 42 ಕಾಂಡೋಮ್ ಕೊಡಲಾಗಿದೆ. ಅವುಗಳಲ್ಲಿ ಒಂದು ಲಕ್ಷ ಸ್ತ್ರೀ ಕಾಂಡೋಮ್ ಗಳಾಗಿದ್ದವು.
2000 ರ ಸಿಡ್ನಿ ಒಲಿಂಪಿಕ್ಸ್ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಸಂಘಟಕರು ಕ್ರೀಡಾಪಟುಗಳ ಬೇಡಿಕೆಯ ಅನುಸಾರ ಹೆಚ್ಚುವರಿಯಾಗಿ 20 ಸಾವಿರ ಕಾಂಡೋಮ್ ಪೂರೈಸಿದ್ದರು.
ಈ ವರ್ಷ ಒಲಂಪಿಕ್ ಸಂದರ್ಭದಲ್ಲಿ ಕ್ರೀಡಾಪಟುಗಳು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಹ್ಯಾಂಡ್ ಶೇಕ್ ಮತ್ತು ಅಪ್ಪುಗೆ ಮಾಡಬಾರದು. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.